ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಕುರಿತು ಪ್ರಧಾನಿ ದುರ್ಬಲ ಹೇಳಿಕೆ: ಕಾಂಗ್ರೆಸ್‌ ಟೀಕೆ

Published 11 ಏಪ್ರಿಲ್ 2024, 15:26 IST
Last Updated 11 ಏಪ್ರಿಲ್ 2024, 15:26 IST
ಅಕ್ಷರ ಗಾತ್ರ

ನವದೆಹಲಿ: ಚೀನಾಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆಯು ದುರ್ಬಲವಾಗಿದ್ದು, ಪರಿಣಾಮಕಾರಿಯಾಗಿಲ್ಲ ಎಂದು ಕಾಂಗ್ರೆಸ್‌ ಗುರುವಾರ ಟೀಕೆ ಮಾಡಿದೆ.

‘ಗಡಿಯನ್ನು ಅತಿಕ್ರಮಿಸುತ್ತಿರುವ ಚೀನಾಗೆ ಪ್ರಬಲ ಸಂದೇಶವನ್ನು ಪ್ರಧಾನಿ ರವಾನಿಸಬಹುದಿತ್ತು. ಆದರೆ, ಅವರು ಹೇಡಿತನ ಮೆರೆದಿದ್ದಾರೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಪ್ರಧಾನಿ ಅವರು ನ್ಯೂಸ್‌ವೀಕ್‌ ಮ್ಯಾಗ್‌ಜಿನ್‌ಗೆ ನೀಡಿದ ಸಂದರ್ಶನದಲ್ಲಿ ಭಾರತ– ಚೀನಾ ಗಡಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾತನಾಡಿದ್ದರು.

ಆ ಕುರಿತು ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಜೈರಾಮ್‌ ರಮೇಶ್‌ ಅವರು, ‘ಭಾರತದ ಸಾರ್ವಭೌಮತ್ವವನ್ನು ಪದೇ ಪದೇ ಕೆಣಕುತ್ತಿರುವ ಚೀನಾಗೆ ಪ್ರಧಾನಿ ಪ್ರಬಲ ಸಂದೇಶ ಕೊಡಬಹುದಿತ್ತು. ಆದರೆ, ಅವರು ಎರಡು ದೇಶಗಳ ದ್ವಿಪಕ್ಷೀಯ ಸಂವಾದದಲ್ಲಿನ ಅಸಹಜತೆಯನ್ನು ಪರಿಹರಿಸಲು ಗಡಿ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಬೇಕಿದೆ ಎಂದಷ್ಟೇ ಹೇಳಿದ್ದಾರೆ’ ಎಂದು ತಿಳಿಸಿದ್ದಾರೆ.

‘ಪ್ರಧಾನಿ ನೀಡಿರುವ ದುರ್ಬಲ ಮತ್ತು ಪರಿಣಾಮಕಾರಿಯಲ್ಲದ ಪ್ರತಿಕ್ರಿಯೆಯು ಭಾರತದ ಭೂ ಪ್ರದೇಶದ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸುವಲ್ಲಿ ಚೀನಾವನ್ನು ಮತ್ತಷ್ಟು ಉತ್ತೇಜಿಸುವ ಸಾಧ್ಯತೆಯಿದೆ’ ಎಂದು ಅವರು ಹೇಳಿದ್ದಾರೆ. 

‘ಪ್ರಧಾನಿಯವರ ಈ ಹೇಳಿಕೆಯು ಅವಮಾನಕರ ಮಾತ್ರವಲ್ಲ, ನಮ್ಮ ಗಡಿಗಳನ್ನು ರಕ್ಷಿಸುವಲ್ಲಿ ತೊಡಗಿರುವ ಮತ್ತು ಹುತಾತ್ಮರಿಗೂ ತೋರಿದ ಅಗೌರವ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

‘ಮೋದಿ ಅವರು 2020ರ ಜೂನ್‌ 19ರಂದು ದೂರದರ್ಶನದಲ್ಲಿ ಭಾರತದ ನೆಲವನ್ನು ಯಾರೂ ಅತಿಕ್ರಮಿಸಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ನೀಡಿ ಜನರನ್ನು ವಂಚಿಸಿದ್ದಕ್ಕಾಗಿ ಅವರು ದೇಶದ 140 ಕೋಟಿ ಜನರ ಕ್ಷಮೆಯಾಚಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT