ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ: ಆರೋ‍ಪಿ ವೈದ್ಯನ ಬಂಧನಕ್ಕೆ ವಾಹನ ಸಮೇತ ಏಮ್ಸ್‌ಗೆ ನುಗ್ಗಿದ ಪೊಲೀಸರು

Published 23 ಮೇ 2024, 10:58 IST
Last Updated 23 ಮೇ 2024, 10:58 IST
ಅಕ್ಷರ ಗಾತ್ರ

ಡೆಹಾಡ್ರೂನ್‌(ಉತ್ತರಾಖಂಡ): ಮಹಿಳಾ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವೈದ್ಯನನ್ನು ಬಂಧಿಸಲು ಪೊಲೀಸರು ತಮ್ಮ ವಾಹನ ಸಮೇತ ಆಸ್ಪತ್ರೆಯ ಏಮರ್ಜನ್ಸಿ ವಾರ್ಡ್‌ ಒಳಗೆ ನುಗ್ಗಿದ ಘಟನೆ ಋಷಿಕೇಶದ ಏಮ್ಸ್‌ ಆಸ್ಪತ್ರೆಯಲ್ಲಿ ನಡೆದಿದೆ.

ಸಿನಿಮೀಯ ಕಾರ್ಯಾಚರಣೆಯಲ್ಲಿ ನಾಲ್ಕನೇ ಮಹಡಿಯಲ್ಲಿರುವ ಏಮರ್ಜನ್ಸಿ ವಾರ್ಡ್‌ಗೆ ವಾಹನ ಸಮೇತ ನುಗ್ಗಿದ ಡೆಹ್ರಾಡೂನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಆಸ್ಪತ್ರೆ ಒಳಗೆ ಆರೋಪಿಯಿರುವ ಮಾಹಿತಿ ಪಡೆದ ಪೊಲೀಸರು, ‘ದಬಾಂಗ್’ ಸಿನಿಮಾದ ಶೈಲಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆ‍ಸ್ಪತ್ರೆಯ ಇಳಿಜಾರು ಮಾರ್ಗದಲ್ಲಿ ವಾಹನವನ್ನು ಓಡಿಸಿ ಆಸ್ಪತ್ರೆಯ ನಾಲ್ಕನೇ ಮಹಡಿ ತಲುಪಿದ ಅವರು, ಅಲ್ಲಿಂದಲೇ ಆರೋಪಿಯನ್ನು ಬಂಧಿಸಿದ್ದಾರೆ. ಈ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಾಹನ ಸಮೇತ ಆಸ್ಪತ್ರೆ ಒಳಗೆ ನುಗ್ಗಿದ್ದರಿಂದ ಆಸ್ಪತ್ರೆ ಒಳಗೆ ಗೊಂದಲ ಸೃಷ್ಟಿಯಾಗಿತ್ತು. ವಾರ್ಡ್‌ಗೆ ಪೊಲೀಸ್ ವಾಹನ ಬರುತ್ತಿರುವ ವೇಳೆ ದಾರಿಯನ್ನು ತೆರವುಗೊಳಿಸಲು ಆಸ್ಪತ್ರೆಯ ಸಿಬ್ಬಂದಿ ಹರಸಾಹಸ ಪಡುತ್ತಿರುವುದನ್ನು ದೃಶ್ಯದಲ್ಲಿ ಕಾಣಬಹುದಾಗಿದೆ. ರೋಗಿಗಳ ಬೆಡ್ ಮತ್ತು ಸ್ಟ್ರೆಚರ್‌ಗಳನ್ನು ತರಾತುರಿಯಲ್ಲಿ ಪಕ್ಕಕ್ಕೆ ಸರಿಸಿ ಪೊಲೀಸ್ ವಾಹನ ತೆರಳಲು ‌ಸಿಬ್ಬಂದಿ ಅನುವು ಮಾಡಿಕೊಟ್ಟಿದ್ದಾರೆ.

ಆರೋಪಿಯನ್ನು ಸತೀಶ್ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಯು ರಿಷಿಕೇಶದ ಏಮ್ಸ್‌ನಲ್ಲಿ ನರ್ಸಿಂಗ್ ಅಧಿಕಾರಿಯಾಗಿದ್ದು, ಆಸ್ಪತ್ರೆಯ ಮಹಿಳಾ ವೈದ್ಯರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದರು ಎನ್ನಲಾಗಿದೆ.

ಆರೋಪಿಯನ್ನು ಬಂಧಿಸಲು ಪೊಲೀಸರು ಅನುಸರಿಸಿದ ವಿಧಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದ್ದು, ಪೊಲೀಸರ ಈ ನಡೆಯು ಆಸ್ಪತ್ರೆಯ ಇತರೆ ರೋಗಿಗಳನ್ನು ಸಂಕಷ್ಟ ದೂಡಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT