ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಡತನ ಪ್ರಮಾಣ ಶೇ 8.5ಕ್ಕೆ ಇಳಿಕೆ: ಎನ್‌ಸಿಎಇಆರ್‌ ವರದಿ

ಚಿಂತಕರ ಚಾವಡಿ ಎನ್‌ಸಿಎಇಆರ್‌ ಸಂಶೋಧನಾ ವರದಿಯಲ್ಲಿ ಉಲ್ಲೇಖ
Published 3 ಜುಲೈ 2024, 16:07 IST
Last Updated 3 ಜುಲೈ 2024, 16:07 IST
ಅಕ್ಷರ ಗಾತ್ರ

ನವದೆಹಲಿ: ಸಾಂಕ್ರಾಮಿಕವು ಒಡ್ಡಿದ್ದ ಸವಾಲಿನ ಹೊರತಾಗಿಯೂ ಭಾರತದಲ್ಲಿ 2022–24ರ ಅವಧಿಯಲ್ಲಿ ಬಡತನ ಪ್ರಮಾಣ ಶೇ 8.5ಕ್ಕೆ ಇಳಿಕೆಯಾಗಿದೆ. 2011–12ರಲ್ಲಿ ಬಡತನ ಪ್ರಮಾಣ ಶೇ 21.2ರಷ್ಟಿತ್ತು ಎಂದು ಚಿಂತಕರ ಚಾವಡಿ ಎನ್‌ಸಿಎಇಆರ್‌ ಸಂಶೋಧನಾ ವರದಿ ಹೇಳಿದೆ.

ಭಾರತದ ಮಾನವ ಅಭಿವೃದ್ಧಿ ಸಮೀಕ್ಷೆಯ (ಐಎಚ್‌ಡಿಎಸ್‌) 1, 2 ಮತ್ತು 3ನೇ ಆವೃತ್ತಿಯ ದತ್ತಾಂಶಗಳನ್ನು ಬಳಸಿಕೊಂಡು ಎನ್‌ಸಿಎಇಆರ್‌ನ ಸೋನಾಲ್ದೆ ದೇಸಾಯಿ ಅವರು ರಚಿಸಿದ ‘ರಿಥಿಂಕಿಂಗ್‌ ಸೋಷಿಯಲ್‌ ಸೇಫ್ಟಿ ನೆಟ್ಸ್‌ ಇನ್‌ ಎ ಚೇಂಜಿಂಗ್‌ ಸೊಸೈಟಿ’ ಕುರಿತ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ.

ಐಎಚ್‌ಡಿಎಸ್‌ ಪ್ರಕಾರ, ಭಾರತದಲ್ಲಿ ಬಡತನ ಪ್ರಮಾಣವು ಗಣನೀಯವಾಗಿ ತಗ್ಗುತ್ತಿದೆ. 2004–05ರಲ್ಲಿ ಶೇ 38.6ರಷ್ಟಿದ್ದ ಬಡತನ ಪ್ರಮಾಣವು 2011–12ರ ವೇಳೆಗೆ ಶೇ 21.2ಕ್ಕೆ ತಗ್ಗಿತ್ತು. ಇದೀಗ ಶೇ 8.5ಕ್ಕೆ ಇಳಿಕೆಯಾಗಿದೆ. 10 ವರ್ಷದಲ್ಲಿ ಬಡತನ ಪ್ರಮಾಣ ಶೇ 12.7ರಷ್ಟು ಇಳಿಕೆಯಾಗಿದೆ.

ದೀರ್ಘಕಾಲದ ಬಡತನವನ್ನು ನಿವಾರಿಸಲು ಕೈಗೊಳ್ಳುವ ಸಾಂಪ್ರದಾಯಿಕ ತಂತ್ರಗಳು ಕಡಿಮೆ ಪರಿಣಾಮಕಾರಿಯಾಗಬಹುದು ಎಂದೂ ವರದಿಯು ಹೇಳಿದೆ.

ಭಾರತವು ಅಭಿವೃದ್ಧಿಯತ್ತ ಸಾಗುತ್ತಿದ್ದು, ಸಾಮಾಜಿಕ ಸಂರಕ್ಷಣಾ ವ್ಯವಸ್ಥೆಗಳು, ಸಾಮಾಜಿಕ ಪರಿವರ್ತನೆಯ ವೇಗದೊಂದಿಗೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳುವುದು ಭಾರತಕ್ಕೆ ಪ್ರಮುಖ ಸವಾಲಾಗಿದೆ ಎಂದು ವರದಿ ತಿಳಿಸಿದೆ.

ಇದೇ ಸಂದರ್ಭದಲ್ಲಿ, ಆರ್ಥಿಕ ಬೆಳವಣಿಗೆಯ ಯುಗದಲ್ಲಿ ವಿಫುಲ ಅವಕಾಶಗಳು ದೊರೆತಾಗ, ದೀರ್ಘಾವಧಿಯಲ್ಲಿ ಬಡತನ ಪ್ರಮಾಣ ಕಡಿಮೆಯಾಗಬಹುದು. ಆದರೆ ನೈಸರ್ಗಿಕ ವಿಪತ್ತು, ಅನಾರೋಗ್ಯ ಮತ್ತು ಸಾವುಗಳಿಗೆ ಸಂಬಂಧಿಸಿದ ಆಕಸ್ಮಿಕ ಘಟನೆಗಳು ಹಾಗೂ ಉದ್ಯೋಗ-ನಿರ್ದಿಷ್ಟ ಅವಕಾಶಗಳಲ್ಲಿನ ಬದಲಾವಣೆಗಳು ಹೆಚ್ಚು ಮುಖ್ಯವಾಗಬಹುದು ಎಂದು ಹೇಳಿದೆ.

ಇದಕ್ಕೂ ಮುನ್ನ ನೀತಿ ಆಯೋಗದ ಸಿಇಒ ಬಿ.ವಿ.ಆರ್‌ ಸುಬ್ರಮಣ್ಯಂ ಅವರು, ಇತ್ತೀಚಿನ ಗ್ರಾಹಕ ವೆಚ್ಚ ಸಮೀಕ್ಷೆ ಪ್ರಕಾರ, ದೇಶದಲ್ಲಿ ಬಡತನ ಪ್ರಮಾಣವು ಶೇ 5ಕ್ಕೆ ತಗ್ಗಿದೆ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT