ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಹುಲ್‌ ಅವರದ್ದು ಬಾಲಕ ಬುದ್ಧಿ: ಮೋದಿ

ನಮ್ಮದು ತುಷ್ಟೀಕರಣವಲ್ಲ, ಸಂತುಷ್ಟೀಕರಣ: ಮೋದಿ
Published 2 ಜುಲೈ 2024, 16:40 IST
Last Updated 2 ಜುಲೈ 2024, 16:40 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡುವುದನ್ನು ಕಾಂಗ್ರೆಸ್‌ ವಿರುದ್ಧ ತೀಕ್ಷ್ಣ ಟೀಕೆಗೆ ವೇದಿಕೆಯನ್ನಾಗಿ ಬಳಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ‘ದೇಶವು ತುಷ್ಟೀಕರಣದ ರಾಜಕೀಯವನ್ನು ದೀರ್ಘಕಾಲ ನೋಡಿದೆ. ನಾವು ತುಷ್ಟೀಕರಣ ಅನುಸರಿಸದೆ 'ಸಂತುಷ್ಟಿಕರಣ' ಅನುಸರಿಸಿದ್ದೇವೆ’ ಎಂದು ಪ್ರತಿಪಾದಿಸಿದರು. 

ಮಣಿಪುರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಸದಸ್ಯರ ಧರಣಿ ಹಾಗೂ ಗದ್ದಲದ ನಡುವೆಯೂ ಲೋಕಸಭೆಯಲ್ಲಿ ಮಂಗಳವಾರ ಸುಮಾರು ಎರಡೂವರೆ ಗಂಟೆ ಮಾತನಾಡಿದ ಅವರು, ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ತೀವ್ರ ವಾಗ್ದಾಳಿ ನಡೆಸಿದರು. ‘ರಾಹುಲ್‌ ಅವರದ್ದು ಬಾಲಕ ಬುದ್ಧಿ’ ಎಂದು ಕಾಲೆಳೆದರು.

‘ಸತ್ಯವನ್ನು ಹತ್ತಿಕಲು ಸಾಧ್ಯವಿಲ್ಲ, ಸುಳ್ಳುಗಳಿಗೆ ಬೇರುಗಳಿಲ್ಲ. ಘೋಷಣೆಗಳನ್ನು ಕೂಗುವ ಮೂಲಕ ಸತ್ಯವನ್ನು ಎಂದಿಗೂ ಸೋಲಿಸಲಾಗುವುದಿಲ್ಲ. ನಾನು ಇಂದು ಸತ್ಯದ ಶಕ್ತಿಯಲ್ಲಿ ಬದುಕಿದ್ದೇನೆ’ ಎಂದೂ ಅವರು ಹೇಳಿದರು.

ಭಾಷಣ ಮುಗಿಸುವ ಮುನ್ನ ಅವರು, ಬಾಲಕ ಬುದ್ಧಿಯು ಸದ್ಭುದ್ದಿಯನ್ನು ಪಡೆಯಲಿ’ ಎಂದು ವ್ಯಂಗ್ಯವಾಗಿ ಹೇಳಿದರು. ಹಿಂದೂ ಧರ್ಮದ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ಪ್ರಧಾನಿ, ‘ಹಿಂದೂಗಳ ಮೇಲೆ ಸುಳ್ಳು ಆರೋಪ ಹೊರಿಸುವ ಸಂಚು ಗಂಭೀರ ವಿಷಯವಾಗಿದೆ’ ಎಂದರು. 

‘ನಿನ್ನೆ ನಡೆದದ್ದನ್ನು ದೇಶದ ಜನರು ಎಂದಿಗೂ ಕ್ಷಮಿಸುವುದಿಲ್ಲ. ಹಿಂದೂಗಳು ಹಿಂಸಾತ್ಮಕರು ಎಂದು ಹೇಳಲಾಗಿದೆ. ಇದು ನಿಮ್ಮ ಮೌಲ್ಯವೇ? ಇದು ನಿಮ್ಮ ಗುಣವೇ? ಇದು ಈ ದೇಶದ ಹಿಂದೂಗಳ ಮೇಲಿನ ನಿಮ್ಮ ದ್ವೇಷವೇ? ಈ ದೇಶ ಇದನ್ನು ಶತಮಾನಗಳವರೆಗೆ ಮರೆಯುವುದಿಲ್ಲ. ಅವರ ಮಿತ್ರರು ಹಿಂದೂ ಧರ್ಮವನ್ನು ಡೆಂಗಿ, ಮಲೇರಿಯಾ ಇತ್ಯಾದಿಗಳೊಂದಿಗೆ ಹೋಲಿಸಲು ಪ್ರಯತ್ನಿಸಿದ್ದರು. ಇದು ಕಾಕತಾಳೀಯವೋ ಅಥವಾ ಸಂಚಿನ ಭಾಗವೋ’ ಎಂದು ಅವರು ಪ್ರಶ್ನಿಸಿದರು. 

‘ತಾನು ಮಾಡಿದ ತಪ್ಪುಗಳನ್ನು ಬಹಿರಂಗಪಡಿಸದೆ ಸಹಾನುಭೂತಿ ಪಡೆಯಲು ಪ್ರಯತ್ನಿಸಿದ ‘ಬಾಲಕ ಬುದ್ಧಿ’ಯ ವ್ಯಕ್ತಿಯ ರೋದನೆಗೆ ಸದನ ಸಾಕ್ಷಿಯಾಗಿದೆ’ ಎಂದು ಛೇಡಿಸಿದ ಪ್ರಧಾನಿ, ‘ಸ್ಪೀಕರ್ ಸರ್... ನೀವು ಎಲ್ಲವನ್ನೂ ನಗುಮುಖದಿಂದ ಸಹಿಸಿಕೊಳ್ಳುತ್ತೀರಿ. ಆದರೆ, ಸೋಮವಾರ ಇಲ್ಲಿ ನಡೆದದ್ದಕ್ಕೆ ಏನಾದರೂ ಮಾಡಬೇಕು. ಇಲ್ಲದಿದ್ದರೆ ಅದು ಸಂಸತ್ತಿಗೆ ಒಳ್ಳೆಯದಲ್ಲ. ಅಂತಹ ಪ್ರಯತ್ನಗಳನ್ನು ಬಾಲಿಶತನದ ವರ್ತನೆಯೆಂದು ಕರೆದು ನಿರ್ಲಕ್ಷಿಸಬಾರದು. ಇದರ ಹಿಂದೆ ಆಳವಾದ ಪಿತೂರಿ ಇದೆ’ ಎಂದು ಹೇಳಿದರು.

ಪ್ರಧಾನಿ ಭಾಷಣಕ್ಕೆ ಪ್ರತಿಪಕ್ಷಗಳು ಅಡ್ಡಿಪಡಿಸಿದ್ದನ್ನು ಖಂಡಿಸುವ ನಿರ್ಣಯವನ್ನು ಲೋಕಸಭೆ ಅಂಗೀಕರಿಸಿತು. ಬಳಿಕ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT