ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಚ್ಚತೀವು ದ್ವೀಪ: ಪ್ರಧಾನಿ ಮೋದಿ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ತಿರುಗೇಟು

Published 31 ಮಾರ್ಚ್ 2024, 13:17 IST
Last Updated 31 ಮಾರ್ಚ್ 2024, 13:17 IST
ಅಕ್ಷರ ಗಾತ್ರ

ನವದೆಹಲಿ: ‘ತಮ್ಮ 10 ವರ್ಷಗಳ ಅಧಿಕಾರಾವಧಿಯಲ್ಲಿ ಕಚ್ಚತೀವು ದ್ವೀಪವನ್ನು ವಾಪಾಸ್‌ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಏಕೆ ಕ್ರಮ ಕೈಗೊಂಡಿಲ್ಲ‘ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ಕಚ್ಚತೀವು ದ್ವೀಪ ಕುರಿತ ಕಾಂಗ್ರೆಸ್‌ ವಿರುದ್ಧದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಸಂಬಂಧ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಖರ್ಗೆ, ‘ಪ್ರಧಾನಿ ಮೋದಿ ಅವರೇ, ನಿಮ್ಮ 10 ವರ್ಷದ ದುರಾಡಳಿತದಲ್ಲಿ ಪ್ರಾದೇಶಿಕ ಸಮಗ್ರತೆ ಮತ್ತು ರಾಷ್ಟ್ರೀಯ ಭದ್ರತೆ ಸಮಸ್ಯೆಗಳ ಕುರಿತು ಇದ್ದಕ್ಕಿದ್ದಂತೆ ಎಚ್ಚೆತ್ತುಕೊಂಡಿದ್ದೀರಿ. ಬಹುಶಃ ಲೋಕಸಭಾ ಚುನಾವಣೆಯು ಬಹಳ ಪ್ರಚೋದನಕಾರಿಯಾಗಿರಬೇಕು. ಚುನಾವಣೆಯ ಸಂದರ್ಭದಲ್ಲಿ ಇಂತಹ ಸೂಕ್ಷ್ಮ ವಿಷಯವನ್ನು ಪ್ರಸ್ತಾಪಿಸಿರುವುದು ನಿಮ್ಮ ಹತಾಶೆಯನ್ನು ಸ್ಪಷ್ಟವಾಗಿ ತೋರಿಸುತ್ತಿದೆ’ ಎಂದು ಹೇಳಿದ್ದಾರೆ.

1974ರಲ್ಲಿ ಸೌಹಾರ್ದ ಒಪ್ಪಂದದ ಭಾಗವಾಗಿ ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ನೀಡಲಾಯಿತು ಎಂದು ಹೇಳಿರುವ ಖರ್ಗೆ, ಗಡಿ ಪ್ರದೇಶಗಳ ವಿನಿಮಯದ ಕುರಿತು ಬಾಂಗ್ಲಾದೇಶದೊಂದಿಗೆ ಪ್ರಧಾನಿ ಮೋದಿ ಅವರ ಸರ್ಕಾರ ಕೂಡ ಇದೇ ರೀತಿಯ ಸೌಹಾರ್ದ ಒಪ್ಪಂದವನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.

‘ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ಕಚ್ಚತೀವು ದ್ವೀಪವನ್ನು ಹಿಂಪಡೆಯಲು ನಿಮ್ಮ ಸರ್ಕಾರ ಏನಾದರೂ ಕ್ರಮ ಕೈಗೊಂಡಿದೆಯೇ ಎಂದು ನೀವು ಹೇಳಬೇಕು. ಪೂರ್ವ ಲಡಾಖ್‌ನ ಗಾಲ್ವಾನ್‌ ಕಣಿವೆಯಲ್ಲಿ ನಮ್ಮ 20 ಯೋಧರು ಪ್ರಾಣ ತ್ಯಾಗ ಮಾಡಿದ ನಂತರವೂ ಪ್ರಧಾನಿ ಮೋದಿ ಅವರು ಚೀನಾಕ್ಕೆ ಕ್ಲೀನ್‌ ಚಿಟ್‌ ನೀಡಿದ್ದು ಏಕೆ’ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಇಂದಿರಾ ಗಾಂಧಿ ಅವರು 1974ರಲ್ಲಿ ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT