ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಸಭಾ ಚುನಾವಣೆ: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ನೆರವಾದ ಅಡ್ಡಮತ

ಬಿಜೆಪಿಗೆ 8, ಎಸ್‌ಪಿಗೆ 2 ಸ್ಥಾನ
Published 27 ಫೆಬ್ರುವರಿ 2024, 23:30 IST
Last Updated 27 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆಯ 10 ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯು ಎಂಟರಲ್ಲಿ ಗೆಲುವು ಸಾಧಿಸಿದೆ. ಉಳಿದ ಎರಡು ಸ್ಥಾನಗಳನ್ನು ಸಮಾಜವಾದಿ ಪಕ್ಷ (ಎಸ್‌ಪಿ) ಗೆದ್ದುಕೊಂಡಿದೆ. ಹೆಚ್ಚಿನ ಸಂಖ್ಯೆಯ ಅಡ್ಡ ಮತಗಳು ಬಿಜೆಪಿ ಪರವಾಗಿ ಬಂದ ಕಾರಣ, ಪಕ್ಷದ ಎಂಟನೇ ಅಭ್ಯರ್ಥಿ ಗೆಲುವಿನ ನಗು ಬೀರಿದ್ದಾರೆ. 

ಎಸ್‌ಪಿಯ ಏಳು ಶಾಸಕರು ಬಿಜೆಪಿ ಅಭ್ಯರ್ಥಿಗಳ ಪರ ಚಲಾಯಿಸಿದ್ದಾರೆ ಎಂದು ಮೂಲಗಳು ಹೇಳಿವೆ. ‘ಕೇಸರಿ’ ಪಡೆಗೆ ಎಸ್‌ಬಿಎಸ್‌ಪಿ, ಆರ್‌ಎಲ್‌ಡಿ ಶಾಸಕರ ಬೆಂಬಲವೂ ದೊರೆಯಿತು. ಬಿಎಸ್‌ಪಿಯ ಏಕೈಕ ಸದಸ್ಯ ಮತ್ತು ಕಾಂಗ್ರೆಸ್‌ನ ಇಬ್ಬರು ಶಾಸಕರಲ್ಲಿ ಒಬ್ಬರು, ಬಿಜೆಪಿಗೆ ಮತ ಹಾಕಿದ್ದಾರೆ.

403 ಸದಸ್ಯಬಲದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಹಾಲಿ 399 ಸದಸ್ಯರಿದ್ದು, ನಾಲ್ಕು ಸ್ಥಾನಗಳು ಖಾಲಿಯಿವೆ. 399 ರಲ್ಲಿ 395 ಶಾಸಕರು ಮತ ಚಲಾಯಿಸಿದರು. ಮೂವರು ಜೈಲಿನಲ್ಲಿರುವ ಕಾರಣ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ. ಇನ್ನೊಬ್ಬ ಶಾಸಕ ಏಕೆ ಮತ ಚಲಾಯಿಸಿಲ್ಲ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. 

ಬಿಜೆಪಿಯ 252 ಮತ್ತು ಎಸ್‌ಪಿಯ 108 ಶಾಸಕರು ಇದ್ದಾರೆ. ಒಬ್ಬ ಅಭ್ಯರ್ಥಿಯ ಗೆಲುವಿಗೆ ಪ್ರಥಮ ಪ್ರಾಶಸ್ತ್ಯದ 37 ಮತಗಳ ಅಗತ್ಯವಿತ್ತು. ಬಿಜೆಪಿಯು ಎಂಟು ಹಾಗೂ ಎಸ್‌ಪಿ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.


ಮುಖ್ಯ ಸಚೇತಕ ರಾಜೀನಾಮೆ: ಎಸ್‌ಪಿಗೆ ಅಡ್ಡಮತದಾನದ ಆತಂಕದ ನಡುವೆಯೇ ಬೆಳಿಗ್ಗೆ 9ಕ್ಕೆ ಮತದಾನ ಪ್ರಕ್ರಿಯೆ ಆರಂಭವಾಯಿತು. ಇದೇ ವೇಳೆ ಪಕ್ಷದ ಮುಖ್ಯಸಚೇತಕ ಮನೋಜ್‌ ಪಾಂಡೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ರಾಯಬರೇಲಿಯ ಊಂಚಾಹಾರ್ ಕ್ಷೇತ್ರದ ಶಾಸಕರಾಗಿರುವ ಪಾಂಡೆ, ಈ ಹಿಂದೆ ಅಖಿಲೇಶ್‌ ಯಾದವ್ ಸರ್ಕಾರದಲ್ಲಿ ಸಚಿವರೂ ಆಗಿದ್ದರು. 

ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಸಕರನ್ನು ಒಟ್ಟಾಗಿ ಇರಿಸುವ ನಿಟ್ಟಿನಲ್ಲಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಸೋಮವಾರ ತಮ್ಮ ನಿವಾಸದಲ್ಲಿ ಕರೆದಿದ್ದ ಸಭೆಯಲ್ಲಿ ಪಾಂಡೆ ಸೇರಿದಂತೆ ಎಂಟು ಶಾಸಕರು ಗೈರಾಗಿದ್ದರು.

ಮತದಾನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅಖಿಲೇಶ್, ಅಡ್ಡಮತದಾನ ಮಾಡುವ ಶಾಸಕರ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದರು. ‘ಪರಿಸ್ಥಿತಿಯ ಲಾಭ ಪಡೆಯಲು ಬಯಸಿದವರು ಮತ್ತು ಬಿಜೆಪಿಯಿಂದ ಆಶ್ವಾಸನೆಗಳನ್ನು ಪಡೆದವರು ಪಕ್ಷದಿಂದ ಹೊರಹೋಗಬೇಕು’
ಎಂದಿದ್ದರು.

ಗೆದ್ದ ಅಭ್ಯರ್ಥಿಗಳು
ಬಿಜೆಪಿ ಆರ್‌ಪಿಎನ್‌ ಸಿಂಗ್ (ಕೇಂದ್ರದ ಮಾಜಿ ಸಚಿವ), ಚೌಧರಿ ತೇಜ್‌ವೀರ್‌ ಸಿಂಗ್ (ಮಾಜಿ ಸಂಸದ), ಅಮರ್‌ಪಾಲ್‌ ಮೌರ್ಯ (ಉತ್ತರ ಪ್ರದೇಶ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ), ಸಂಗೀತಾ ಬಲವಂತ್ (ಮಾಜಿ ಸಚಿವೆ), ಸುಧಾನ್ಶು ತ್ರಿವೇದಿ (ಪಕ್ಷದ ವಕ್ತಾರ), ಸಾಧನಾ ಸಿಂಗ್‌ (ಮಾಜಿ ಶಾಸಕಿ), ನವೀನ್‌ ಜೈನ್ (ಆಗ್ರಾದ ಮಾಜಿ ಮೇಯರ್) ಮತ್ತು ಸಂಜಯ್‌ ಸೇಠ್‌ (ಉದ್ಯಮಿ) ಎಸ್‌‍ಪಿ ಜಯಾ ಬಚ್ಚನ್ (ಸಂಸದೆ, ನಟಿ), ರಾಮ್ಜಿ ಲಾಲ್‌ ಸುಮನ್ (ದಲಿತ ಮುಖಂಡ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT