ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ ಪ್ರವಾಹ ಪರಿಹಾರ ನಿಧಿಗೆ ₹ 51 ಲಕ್ಷ ನೀಡಿದ ಶಿವಸೇನಾ ಬಂಡಾಯ ಶಾಸಕರು

ಪ್ರವಾಹದಿಂದ ಕಂಗೆಟ್ಟ ಅಸ್ಸಾಂ ಜನರ ಅವಸ್ಥೆ ನೋಡಲಾಗುತ್ತಿಲ್ಲ: ಬಂಡಾಯ ಶಾಸಕರ ವಕ್ತಾರ
Last Updated 29 ಜೂನ್ 2022, 7:07 IST
ಅಕ್ಷರ ಗಾತ್ರ

ಮುಂಬೈ: ಅಸ್ಸಾಂ ಪ್ರವಾಹ ಪರಿಹಾರ ನಿಧಿಗೆ ಶಿವಸೇನಾದ ಬಂಡಾಯ ಶಾಸಕರು ₹ 51 ಲಕ್ಷ ನೀಡಿದ್ದಾರೆ. ಕಳೆದ ಒಂದು ವಾರದಿಂದ ಗುವಾಹಟಿಯಲ್ಲಿ ಈ ಶಾಸಕರು ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದಾರೆ.

ಏಕನಾಥ ಶಿಂಧೆ ಅವರ ನೇತೃತ್ವದಲ್ಲಿ ಬಂಡಾಯ ಶಾಸಕರು ಜೂನ್‌ 22ರಂದು ಗುವಾಹಟಿ ಸೇರಿಕೊಂಡಿದ್ದರು. ಮುಂಬೈ ತೊರೆದಿದ್ದ ಈ ಶಾಸಕರು ಗುಜರಾತ್‌ನ ಸೂರತ್‌ ಮೂಲಕ ಗುವಾಹಟಿಗೆ ಬಂದಿದ್ದರು.

'ಅಸ್ಸಾಂ ಸಿಎಂ ಪರಿಹಾರ ನಿಧಿಗೆ ಶಿಂಧೆ ಅವರು ₹ 51 ಲಕ್ಷ ದೇಣಿಗೆ ನೀಡಿದ್ದಾರೆ. ಪ್ರವಾಹದಿಂದ ಕಂಗೆಟ್ಟ ಅಸ್ಸಾಂ ಜನರ ಅವಸ್ಥೆಯನ್ನು ನೋಡಲಾಗುತ್ತಿಲ್ಲ' ಎಂದು ಬಂಡಾಯ ಶಾಸಕರ ವಕ್ತಾರ ದೀಪಕ್‌ ಕೆಸರ್‌ಕರ್‌ ಹೇಳಿದ್ದಾರೆ.

'ಮಹಾರಾಷ್ಟ್ರ ರಾಜ್ಯಪಾಲ ಭಗತ್‌ಸಿಂಗ್‌ ಕೋಶಿಯಾರಿ ಅವರು ಸಿಎಂ ಉದ್ಧವ್‌ ಠಾಕ್ರೆ ಅವರ ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆ ಬಂಡಾಯ ಶಾಸಕರು ಗುರುವಾರ ಮುಂಬೈಗೆ ತಲುಪಲಿದ್ದಾರೆ. ಬುಧವಾರ ಗುವಾಹಟಿಯಿಂದ ಗೋವಾಗೆ ತೆರಳಲಿದ್ದು, ವೈಮಾನಿಕ ದೂರ 1 ಗಂಟೆಯ ವ್ಯಾಪ್ತಿಯ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದ್ದಾರೆ. ಇದರಿಂದ ಸರಿಯಾದ ಸಮಯಕ್ಕೆ ಬಹುಮತ ಸಾಬೀತು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುತ್ತದೆ' ಎಂದು ಕೆಸರ್‌ಕರ್‌ ವಿವರಿಸಿದ್ದಾರೆ.

'ಸಿಎಂ ಠಾಕ್ರೆ ಅವರಿಗೆ ಕಾಂಗ್ರೆಸ್‌ ಮತ್ತು ಎನ್‌ಸಿಪಿಯಿಂದ ದೂರವಿರುವಂತೆ ಪಕ್ಷದ ಶಾಸಕರು ಹೇಳುತ್ತಿದ್ದರು. ಆದರೆ ಅವರು ಶಾಸಕರ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ' ಎಂದು ಶಿಂಧೆ ಆಪ್ತರಾಗಿ ಗುರುತಿಸಿಕೊಂಡಿರುವ ಕೆಸರ್‌ಕರ್‌ ದೂರಿದ್ದಾರೆ.

ಅಸ್ಸಾಂನ ಹಲವೆಡೆ ಪ್ರವಾಹ ಸಂಭವಿಸಿದ್ದ ದಿನಗಳಲ್ಲೇ ಗುವಾಹಟಿಗೆ ಬಂದಿದ್ದ ಮಹಾರಾಷ್ಟ್ರದ ಶಾಸಕರು ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದಾರೆ. ಈ ನಡುವೆ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶಿವಸೇನಾದ ಬಂಡಾಯ ಶಾಸಕರನ್ನು ಭೇಟಿ ಮಾಡಿ ಉಭಯಕುಶಲೋಪರಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT