ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗವನ್ನು ದುರ್ಬಲಗೊಳಿಸುವ ಯತ್ನ: ನಿವೃತ್ತ ನ್ಯಾಯಮೂರ್ತಿಗಳಿಂದ CJIಗೆ ಪತ್ರ

Published 15 ಏಪ್ರಿಲ್ 2024, 5:37 IST
Last Updated 15 ಏಪ್ರಿಲ್ 2024, 5:37 IST
ಅಕ್ಷರ ಗಾತ್ರ

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರಿಗೆ ಪತ್ರ ಬರೆದಿರುವ 21 ಮಂದಿ ನಿವೃತ್ತ ನ್ಯಾಯಮೂರ್ತಿಗಳು, ‘ಒತ್ತಡ ಹೇರುವ, ತಪ್ಪು ಮಾಹಿತಿ ಹರಡುವ ಮತ್ತು ಸಾರ್ವಜನಿಕವಾಗಿ ಅಗೌರವ ತೋರುವ ಮೂಲಕ ಕೆಲವು ಗುಂಪುಗಳು ನ್ಯಾಯಾಂಗದ ಬಲ ಕುಗ್ಗಿಸುವ ಯತ್ನ’ ನಡೆಸಿವೆ ಎಂದು ಹೇಳಿದ್ದಾರೆ.

ಈ ಟೀಕಾಕಾರರು ಸೀಮಿತ ದೃಷ್ಟಿಕೋನದ ರಾಜಕೀಯ ಹಿತಾಸಕ್ತಿಯಿಂದ, ವೈಯಕ್ತಿಕ ಲಾಭಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಇವರು ನ್ಯಾಯಾಂಗ ವ್ಯವಸ್ಥೆ ಯಲ್ಲಿ ಸಾರ್ವಜನಿಕರು ಇರಿಸಿರುವ ನಂಬಿಕೆಯನ್ನು ಹಾಳುಮಾಡಲು ಯತ್ನಿಸುತ್ತಿದ್ದಾರೆ ಎಂದು ಕೂಡ ಪತ್ರದಲ್ಲಿ ಆರೋಪಿಸಲಾಗಿದೆ.

ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ಗಳ ನಿವೃತ್ತ ನ್ಯಾಯಮೂರ್ತಿಗಳು ಈ ಪತ್ರ ಬರೆದಿದ್ದಾರೆ. ಆದರೆ, ತಾವು ಈ ಪತ್ರ ಬರೆದಿದ್ದಕ್ಕೆ ನಿರ್ದಿಷ್ಟವಾಗಿ ಯಾವ ಘಟನೆಗಳು ಕಾರಣ ಎಂಬುದನ್ನು ಅವರು ಉಲ್ಲೇಖಿಸಿಲ್ಲ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕೆಲವು ಪ್ರಕರಣಗಳಲ್ಲಿ ಕೈಗೊಂಡ ಕ್ರಮಗಳ ವಿಚಾರವಾಗಿ ಬಿಜೆಪಿ ಹಾಗೂ ವಿರೋಧ ಪಕ್ಷಗಳ ನಡುವೆ ಆರೋಪ–ಪ್ರತ್ಯಾರೋಪ ನಡೆಯುತ್ತಿರುವ ಹೊತ್ತಿನಲ್ಲಿ ಈ ಪತ್ರ ಬರೆದಿದ್ದಾರೆ.

ನ್ಯಾಯಮೂರ್ತಿಗಳಾದ (ನಿವೃತ್ತ) ದೀಪಕ್ ವರ್ಮ, ಕೃಷ್ಣ ಮುರಾರಿ, ದಿನೇಶ್ ಮಾಹೇಶ್ವರಿ, ಎಂ.ಆರ್. ಶಾ ಅವರು ಪತ್ರ ಬರೆದವರಲ್ಲಿ ಸೇರಿದ್ದಾರೆ. 

ಈ ಗುಂಪುಗಳು ಕಪಟತನದ ದಾರಿ ಹಿಡಿದು, ನ್ಯಾಯಮೂರ್ತಿಗಳು ಹಾಗೂ ನ್ಯಾಯಾಲಯಗಳ ಘನತೆಗೆ ಚ್ಯುತಿ ತರುವಂತೆ ಮಾತುಗಳನ್ನಾಡಿ, ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಸ್ಪಷ್ಟ ಯತ್ನವನ್ನು ನಡೆಸಿವೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

‘ಇಂತಹ ಕೃತ್ಯಗಳು ನ್ಯಾಯಾಂಗದ ಪಾವಿತ್ರ್ಯತೆಗೆ ಅಗೌರವ ತೋರುವುದಷ್ಟೇ ಅಲ್ಲದೆ, ನಿಷ್ಪಕ್ಷಪಾತ ಧೋರಣೆ ಹಾಗೂ ನ್ಯಾಯಸಮ್ಮತ ನಿಲುವಿನ ತತ್ವಕ್ಕೆ ನೇರವಾದ ಸವಾಲು ಒಡ್ಡುತ್ತವೆ’ ಎಂದು ಹೇಳಲಾಗಿದೆ.

‘ತಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿ ಇರುವ ಆದೇಶಗಳನ್ನು ಪ್ರಶಂಸಿಸುವುದು, ಅನುಗುಣವಾಗಿ ಇಲ್ಲದ ಆದೇಶಗಳನ್ನು ತೀವ್ರವಾಗಿ ಟೀಕಿಸುವುದು ನ್ಯಾಯಾಂಗದ ಪರಿಶೀಲನೆ ಹಾಗೂ ಕಾನೂನಿಗೆ ಅನುಗುಣವಾದ ಆಡಳಿತ ಎಂಬ ತತ್ವವನ್ನೇ ದುರ್ಬಲ ಗೊಳಿಸುವಂಥದ್ದು’ ಎಂದು ಪತ್ರದಲ್ಲಿ ಬರೆಯಲಾಗಿದೆ.

ಪ್ರಧಾನಿ ಅಭಿಯಾನದ ಭಾಗ: ಕಾಂಗ್ರೆಸ್

ನವದೆಹಲಿ: ಸಿಜೆಐಗೆ ಬರೆದಿರುವ ಪತ್ರವು, ನ್ಯಾಯಾಂಗವನ್ನು ಬೆದರಿಸುವ ಉದ್ದೇಶದಿಂದ ಪ್ರಧಾನಿಯವರು ನಡೆಸಿರುವ ಅಭಿಯಾನದ ಒಂದು ಭಾಗ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಅತಿದೊಡ್ಡ ಬೆದರಿಕೆ ಬಂದಿರುವುದು ಬಿಜೆಪಿಯ ಕಡೆಯಿಂದ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು ಈ ಪತ್ರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರವಾಗಿ ಹೇಳಿದರು.

‘ಪತ್ರ ಬರೆದವರ ಪಟ್ಟಿಯಲ್ಲಿರುವ ನಾಲ್ಕನೆಯ ಹೆಸರನ್ನು ಗಮನಿಸಿ. ಇದು ಇಡೀ ಪತ್ರದ ಉದ್ದೇಶವನ್ನು ಹೇಳುತ್ತದೆ’ ಎಂದು ರಮೇಶ್‌ ಅವರು ನ್ಯಾಯಮೂರ್ತಿ ಎಂ.ಆರ್. ಶಾ ಅವರ ಹೆಸರು ಉಲ್ಲೇಖಿಸದೆ ಹೇಳಿದರು.

‘ಭಾರತದ ಅತಿದೊಡ್ಡ ಹಗರಣವಾಗಿರುವ ಚುನಾವಣಾ ಬಾಂಡ್ ಯೋಜನೆಯನ್ನು ಟೀಕಿಸಿದ, ಮಣಿಪುರದಲ್ಲಿ ಸಾಂವಿಧಾನಿಕ ವ್ಯವಸ್ಥೆ ಕುಸಿದಿದೆ ಎಂದು ಹೇಳಿದ ನ್ಯಾಯಾಂಗವನ್ನು ಗುರಿಯಾಗಿಸಿಕೊಳ್ಳಲಾಗಿದೆ’ ಎಂದು ರಮೇಶ್ ದೂರಿದರು.

‘ಮೋದಿಯವರ ಜೊತೆ ಸ್ನೇಹದಿಂದಿರುವ 21 ಮಂದಿ ನಿವೃತ್ತ ನ್ಯಾಯಮೂರ್ತಿಗಳ ಪತ್ರವನ್ನು ಮೋದಿಯವರ ಜೊತೆ ಸ್ನೇಹದಿಂದಿರುವ 600 ಮಂದಿ ವಕೀಲರು ಬರೆದ ಪತ್ರದ ಜೊತೆಯೇ ಗಮನಿಸಬೇಕು’ ಎಂದು ರಮೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT