ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗದಲ್ಲಿ ಎಐ ಬಳಕೆ: ಅವಕಾಶ ಮತ್ತು ಸವಾಲುಗಳಿವೆ– ಸಿಜೆಐ

Published 13 ಏಪ್ರಿಲ್ 2024, 15:20 IST
Last Updated 13 ಏಪ್ರಿಲ್ 2024, 15:20 IST
ಅಕ್ಷರ ಗಾತ್ರ

ನವದೆಹಲಿ: ಕಾನೂನು ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯು (ಎಐ) ಕಾನೂನು ವೃತ್ತಿಪರರ ದಕ್ಷತೆ ಮತ್ತು ನಿಖರತೆಯನ್ನು ಹೆಚ್ಚಿಸಲು ಪೂರಕವಾಗುತ್ತದೆ ಎಂದು  ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಸುಪ್ರೀಂ ಕೋರ್ಟ್‌ ಮತ್ತು ಸಿಂಗಪುರದ ನ್ಯಾಯಾಂಗ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಮತ್ತು ಸಂವಾದದ ಕುರಿತ ಎರಡು ದಿನಗಳ ಸಮ್ಮೇಳನದಲ್ಲಿ ಅವರು ಶನಿವಾರ ಮಾತನಾಡಿದರು.

’ನ್ಯಾಯಾಲಯದ ತೀರ್ಪಿನಲ್ಲಿ ಎಐ ಬಳಕೆಯು ಹೊಸ ಅವಕಾಶ ಮತ್ತು ಸವಾಲುಗಳನ್ನು ಒದಗಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.

ಕೊಲಂಬಿಯಾ ಮತ್ತು ಭಾರತದಲ್ಲಿನ ನ್ಯಾಯಾಲಯದ ತೀರ್ಪಿನಲ್ಲಿ ಎಐ, ಪ್ರಮುಖವಾಗಿ ‘ಚಾಟ್‌ಜಿಪಿಟಿ’ ಅನ್ನು ಬಳಸಿಕೊಂಡ ನಿದರ್ಶನಗಳನ್ನು ಅವರು ತಿಳಿಸಿದರು.

ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ಎಐ ಬಳಕೆಯಿಂದ ನೈತಿಕ, ಕಾನೂನು ಮತ್ತು ಪ್ರಾಯೋಗಿಕ ಪರಿಗಣನೆಯಲ್ಲಿ ಕಡೆಗಣನೆ ಆಗದಂತೆ ಎಚ್ಚರವಹಿಸಬೇಕು ಎಂದು ಅವರು ಹೇಳಿದರು.

ಎಐ ತಂತ್ರಜ್ಞಾನವು ನ್ಯಾಯದ ಅನ್ವೇಷಣೆಯನ್ನು ದುರ್ಬಲಗೊಳಿಸುವ ಬದಲು ವರ್ಧಿಸುವಂತಿರಬೇಕು. ಈ ನಿಟ್ಟಿನಲ್ಲಿ ಅದನ್ನು ಖಚಿತಪಡಿಸಿಕೊಳ್ಳಬೇಕಿದೆ. ಈ ಸಂಬಂಧ ಎದುರಾಗುವ ವ್ಯವಸ್ಥಿತ ಸವಾಲುಗಳನ್ನು ಜಾಗರೂಕವಾಗಿ ಎದುರಿಸಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ತಂತ್ರಜ್ಞಾನದ ಬಳಕೆಯನ್ನು ಉಲ್ಲೇಖಿಸಿದ ಅವರು, ಸುಪ್ರೀಂ ಕೋರ್ಟ್‌ ‘ಲೈವ್‌ ಟ್ರಾನ್ಸ್‌ಕ್ರಿಪ್ಷನ್‌ ಸರ್ವೀಸ್‌’ (ನೇರ ಪ್ರತಿಲಿಪಿ ಸೇವೆ) ಅನ್ನು ಪರಿಚಯಿಸಿದೆ. ಈ ಮೂಲಕ ನ್ಯಾಯಾಂಗದ ಪ್ರಕ್ರಿಯೆಗಳನ್ನು ಭಾಷಾಂತರಿಸಲು ಸಾಧ್ಯವಾಗುತ್ತದೆ. ಇದು 18 ಪ್ರಾದೇಶಿಕ ಭಾಷೆಗಳು ಮತ್ತು ಹಿಂದಿಯಲ್ಲಿ ಕಾನೂನಿನ ಮಾಹಿತಿಯು ದೇಶದ ಜನರಿಗೆ ದೊರೆಯಬಹುದು ಎಂಬುದನ್ನು ಖಚಿತಪಡಿಸುತ್ತದೆ ಎಂದರು.

ಎಐ ಬಳಕೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಪ್ರಮುಖ ಎಂದ ಅವರು, ಇದರ ಅಳವಡಿಕೆಯಿಂದ ಎದುರಾಗಬಹುದಾದ ಸಂಭಾವ್ಯ ದೋಷಗಳು ಮತ್ತು ಪಕ್ಷಪಾತಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು.  ಪ್ರಚಲಿತ ಕಾಲಘಟದಲ್ಲಿ ತಂತ್ರಜ್ಞಾನ ಮತ್ತು ಎಐ ಅನಿವಾರ್ಯ ಎಂದು ಅವರು ಹೇಳಿದರು. ಸಿಂಗಪುರದ ಮುಖ್ಯ ನ್ಯಾಯಮೂರ್ತಿ ಸುಂದರೇಶ್‌ ಮೆನನ್‌ ಮತ್ತು ಇತರ ನ್ಯಾಯಮೂರ್ತಿಗಳು, ತಜ್ಞರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT