ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರದ ವಿರುದ್ಧ ಪೈಲಟ್‌ ಪಾದಯಾತ್ರೆ: ಪಕ್ಷದ ನಾಯಕತ್ವದ ವಿರುದ್ಧ ಮತ್ತೆ ಬಂಡಾಯ

ಕಾಂಗ್ರೆಸ್‌ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರ
Published 11 ಮೇ 2023, 15:27 IST
Last Updated 11 ಮೇ 2023, 15:27 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಕಾಂಗ್ರೆಸ್‌ ಮುಖಂಡ ಸಚಿನ್‌ ಪೈಲಟ್‌, ಪಕ್ಷದ ನಾಯಕತ್ವದ ವಿರುದ್ಧ ಮತ್ತೊಮ್ಮೆ ಬಂಡಾಯ ಸಾರಿದ್ದಾರೆ. ವರಿಷ್ಠರ ಮೇಲೆ ಒತ್ತಡ ಹೇರುವ ಹಾಗೂ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಸೇರಿ ರಾಜ್ಯದ ಇತರ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಉದ್ದೇಶದಿಂದ ಪಾದಯಾತ್ರೆಯ ಅಸ್ತ್ರ ಪ್ರಯೋಗಿಸಿದ್ದಾರೆ. 

ಭ್ರಷ್ಟಾಚಾರದ ವಿರುದ್ಧ ಅವರು ಅಜ್ಮೇರ್‌ನಿಂದ ಜೈಪುರಕ್ಕೆ (125 ಕಿ.ಮೀ) ಕೈಗೊಂಡಿರುವ 5 ದಿನಗಳ ‘ಜನ ಸಂಘರ್ಷ ಯಾತ್ರೆ’ಗೆ ಗುರುವಾರ ಚಾಲನೆ ದೊರೆತಿದೆ. 

‘ನನ್ನ ಕೂಗನ್ನು ವರಿಷ್ಠರಿಗೆ ಮುಟ್ಟಿಸುವ, ಜನರ ಧ್ವನಿಯನ್ನು ಆಲಿಸುವ ಹಾಗೂ ಜನರ ಧ್ವನಿಯಾಗುವ ಉದ್ದೇಶದಿಂದ ಪಾದಯಾತ್ರೆ ಕೈಗೊಂಡಿದ್ದೇನೆ’ ಎಂದು ಪೈಲಟ್‌ ಹೇಳಿದ್ದಾರೆ.

‘ಯಾರನ್ನೋ ಗುರಿಯಾಗಿಸಿಕೊಂಡು ಈ ಯಾತ್ರೆ ಕೈಗೊಂಡಿಲ್ಲ’ ಎಂದೂ ಸ್ಪಷ್ಟಪಡಿಸಿದ್ದಾರೆ. 

ರಾಜ್ಯದಲ್ಲಿನ ಸುಡು ಬಿಸಿಲನ್ನು ಉಲ್ಲೇಖಿಸಿ ಮಾತನಾಡಿರುವ ಅವರು ‘ಇದು ಬೆಂಕಿಯ ನದಿ. ಇದರಲ್ಲೇ ನಾವು ಈಜಿ ದಡ ಮುಟ್ಟಬೇಕು’ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. 

ರೈಲಿನ ಮೂಲಕ ಅಜ್ಮೇರ್‌ಗೆ ಬಂದಿಳಿದ ಅವರನ್ನು ಸ್ಥಳೀಯ ಶಾಸಕ ಹಾಗೂ ಪಕ್ಷದ ಕಾರ್ಯಕರ್ತರು ಆದರದಿಂದ ಬರಮಾಡಿಕೊಂಡರು. ಬಳಿಕ ಅವರು ಜೈಪುರದ ರಾಷ್ಟ್ರೀಯ ಹೆದ್ದಾರಿ ಬಳಿ ಆಯೋಜಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು.

ಯಾತ್ರೆ ವೇಳೆ ಕಾಂಗ್ರೆಸ್‌ ಪಕ್ಷದ ಸಾವಿರಾರು ಮಂದಿ ಕಾರ್ಯಕರ್ತರು ಪೈಲಟ್‌ ಅವರೊಂದಿಗೆ ಹೆಜ್ಜೆ ಹಾಕಿದರು. ತ್ರಿವರ್ಣ ಧ್ವಜಗಳನ್ನು ಹಿಡಿದಿದ್ದ ಅವರು ಪೈಲಟ್‌ ಪರ ಘೋಷಣೆಗಳನ್ನು ಮೊಳಗಿಸಿದರು. ಮಾಜಿ ಸಚಿವ ರಾಜೇಂದ್ರ ಚೌಧರಿ ಹಾಗೂ ಸ್ಥಳೀಯ ನಾಯಕ ಮಹೇಂದ್ರ ರಾಲಾವತ್‌ ಅವರು ಪೈಲಟ್‌ ಜೊತೆ ಇದ್ದರು. 

ಯಾತ್ರೆಯಲ್ಲಿ ಸಾಗುತ್ತಿದ್ದ ವಾಹನಗಳ ಮೇಲೆ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ಜವಾಹರಲಾಲ್‌ ನೆಹರೂ, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಭಗತ್‌ ಸಿಂಗ್‌ ಅವರ ಚಿತ್ರಗಳನ್ನೊಳಗೊಂಡ ಪೋಸ್ಟರ್‌ ಕಂಡುಬಂದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT