ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಕಾಯುವ ಜತೆಗೆ ಜನರ ಮನ ಗೆಲ್ಲುವುದು ಮುಖ್ಯ: ಸೈನಿಕರಿಗೆ ರಾಜನಾಥ್ ಕಿವಿಮಾತು

Published 27 ಡಿಸೆಂಬರ್ 2023, 14:34 IST
Last Updated 27 ಡಿಸೆಂಬರ್ 2023, 14:34 IST
ಅಕ್ಷರ ಗಾತ್ರ

ಶ್ರೀನಗರ/ ಜಮ್ಮು: ದೇಶವನ್ನು ಶತ್ರುಗಳಿಂದ ರಕ್ಷಿಸುವ ಕಾರ್ಯಾಚರಣೆಯ ವೇಳೆ ಜನರ ಭಾವನೆಗಳಿಗೆ ನೋವು ಉಂಟಾಗುವಂತಹ ‘ತಪ್ಪು’ ಆಗದಂತೆ ಎಚ್ಚರವಹಿಸಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಭದ್ರತಾ ಪಡೆಗಳಿಗೆ ಕಿವಿಮಾತು ಹೇಳಿದರು.

‍ಪೂಂಛ್‌ ಜಿಲ್ಲೆಯಲ್ಲಿ ಭದ್ರತಾ ಪಡೆಯ ವಾಹನಗಳ ಮೇಲೆ ಉಗ್ರರ ದಾಳಿಯ ಬಳಿಕ ಸೇನೆಯು ವಶಕ್ಕೆ ಪಡೆದಿದ್ದ ಮೂವರು ನಾಗರಿಕರು ನಿಗೂಢವಾಗಿ ಮೃತಪಟ್ಟಿದ್ದರು. ಭದ್ರತಾ ವ್ಯವಸ್ಥೆಯ ಪರಿಶೀಲನೆಗೆ ಬುಧವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಅವರು ನಾಗರಿಕರ ಸಾವಿನ ಘಟನೆಯ ಹಿನ್ನೆಲೆಯಲ್ಲಿ ಈ ಮಾತುಗಳನ್ನಾಡಿದರು.

‘ನೀವು ಈ ದೇಶದ ಕಾವಲುಗಾರರು. ಆದರೆ ದೇಶದ ಭದ್ರತೆಯನ್ನು ಖಾತರಿಪಡಿಸುವ ಜತೆಯಲ್ಲೇ, ಜನರ ಹೃದಯವನ್ನು ಗೆಲ್ಲುವ ಜವಾಬ್ದಾರಿಯೂ ನಿಮ್ಮ ಮೇಲಿದೆ. ದೇಶವಾಸಿಗಳ ಭಾವನೆಗಳಿಗೆ ನೋವು ಉಂಟಾಗುವ ತಪ್ಪು ಮಾಡಬೇಡಿ’ ಎಂದರು.

ಭದ್ರತಾ ಪಡೆಗಳು ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು ಎಂದ ಅವರು, ‘ನಾವು ಯುದ್ಧ ಜಯಿಸಬೇಕು, ಭಯೋತ್ಪಾದಕರನ್ನು ಹತ್ತಿಕ್ಕಬೇಕು ನಿಜ. ಆದರೆ, ಜನರ ಮನ ಗೆಲ್ಲುವುದು ನಿಮ್ಮ ಮೇಲಿರುವ ಬಲುದೊಡ್ಡ ಜವಾಬ್ದಾರಿ’ ಎಂದು ಸಲಹೆ ನೀಡಿದರು.

ಸೇನೆಯ ಮೇಲೆ ನಂಬಿಕೆಯಿದೆ:

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಹತ್ತಿಕ್ಕುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಲಿದ್ದು, ಸೇನೆಯ ಸಾಮರ್ಥ್ಯದ ಮೇಲೆ ಸಂಪೂರ್ಣ ನಂಬಿಕೆಯಿದೆ ಎಂದು ಅವರು ಪ್ರತಿಪಾದಿಸಿದರು.

‘ನಿಮ್ಮ ಧೈರ್ಯ ಮತ್ತು ದೃಢತೆಯ ಮೇಲೆ ನನಗೆ ವಿಶ್ವಾಸವಿದೆ. ಜಮ್ಮು ಮತ್ತು ಕಾಶ್ಮೀರದ ನೆಲದಿಂದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕೆಂಬ ಬದ್ಧತೆಯೊಂದಿಗೆ ನೀವು ಮುಂದುವರಿಯಬೇಕು. ಈ ಹೋರಾಟದಲ್ಲಿ ಗೆಲುವು ಸಾಧಿಸುವ ಸಂಪೂರ್ಣ ನಂಬಿಕೆಯಿದೆ’ ಎಂದು ಜಮ್ಮುವಿನ ರಜೌರಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳನ್ನು ಉದ್ದೇಶಿಸಿ ಅವರು ಹೇಳಿದರು.

ಪೂಂಛ್‌ ಜಿಲ್ಲೆಯಲ್ಲಿ ಡಿ.21 ರಂದು ಭದ್ರತಾ ಪಡೆಯ ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರು.

ಈ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಮತ್ತು ಇತರ ಹಿರಿಯ ಅಧಿಕಾರಿಗಳ ಜತೆಗೂಡಿ ಅವರು ಗಡಿಭಾಗದಲ್ಲಿ ಪರಿಸ್ಥಿತಿಯ ಅವಲೋಕನ ನಡೆಸಿದರು.

ಸೈನಿಕರ ತ್ಯಾಗ ಅಪ್ರತಿಮವಾಗಿದ್ದು ಅದಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಕಾಶ್ಮೀರದಲ್ಲಿ ಗಸ್ತು ಭದ್ರತೆಯನ್ನು ಹೆಚ್ಚಿಸಲು ಸರ್ಕಾರ ಎಲ್ಲ ಕ್ರಮಕೈಗೊಳ್ಳಲಿದೆ
– ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ

ಕುಟುಂಬ ಸದಸ್ಯರ ಭೇಟಿ ನ್ಯಾಯದ ಭರವಸೆ

ಡಿಸೆಂಬರ್‌ 22 ರಂದು ಪೂಂಛ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಮೂವರು ನಾಗರಿಕರ ಕುಟುಂಬ ಸದಸ್ಯರನ್ನು ರಾಜನಾಥ್‌ ಸಿಂಗ್‌ ಅವರು ಬುಧವಾರ ಭೇಟಿಯಾಗಿ ನ್ಯಾಯದ ಭರವಸೆ ನೀಡಿದರು. ವಿಚಾರಣೆಗೆಂದು ಸೇನಾ ಸಿಬ್ಬಂದಿ ಕರೆದೊಯ್ದಿದ್ದ ಸಫೀರ್ ಹೊಸೇನ್‌ ಮೊಹಮ್ಮದ್‌ ಶೌಕತ್‌ ಮತ್ತು ಶಬೀರ್‌ ಅಹ್ಮದ್‌ ಅವರು ಮೃತಪಟ್ಟಿದ್ದರು. ‘ಕಸ್ಟಡಿ ಮರಣ’ ಆರೋಪ ಕೇಳಿಬಂದಿತ್ತಲ್ಲದೆ ಕಾಶ್ಮೀರ ಕಣಿವೆಯಲ್ಲಿ ಜನರ ಆಕ್ರೋಶ ಹೆಚ್ಚಿತ್ತು. ರಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರ ನಾಲ್ವರು ನಾಗರಿಕರನ್ನೂ ಅವರು ಭೇಟಿಯಾದರು.  ಸಾವನ್ನಪ್ಪಿರುವ ಮೂವರು ನಾಗರಿಕರ ಕುಟುಂಬ ವರ್ಗಕ್ಕೆ ತಲಾ ₹ 30 ಲಕ್ಷ ಪರಿಹಾರ ಸರ್ಕಾರಿ ಉದ್ಯೋಗ ಹಾಗೂ ಮನೆ ನಿರ್ಮಿಸಲು ನಿವೇಶನ ನೀಡುವುದಾಗಿ ಜಿಲ್ಲಾಡಳಿತ ಈಗಾಗಲೇ ಭರವಸೆ ನೀಡಿದೆ.

ಯಾವುದೇ ನಿರೀಕ್ಷೆಗಳಿಲ್ಲ: ಫಾರೂಕ್‌ ಅಬ್ದುಲ್ಲಾ

ಶ್ರೀನಗರ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಜಮ್ಮು ಮತ್ತು ಕಾಶ್ಮೀರ ಭೇಟಿಯಲ್ಲಿ ತಮಗೆ ಯಾವುದೇ ನಿರೀಕ್ಷೆಗಳಿಲ್ಲ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಹೇಳಿದ್ದಾರೆ. ‘ಈ ಭೇಟಿಯಿಂದ ನನಗೆ ಯಾವುದೇ ನಿರೀಕ್ಷೆಯಿಲ್ಲ. ಅವರು ಸತ್ತವರನ್ನು (ಸೇನೆಯು ವಿಚಾರಣೆಗೆಂದು ಕರೆದೊಯ್ದ ಮೂವರು ನಿಗೂಢವಾಗಿ ಸಾವನ್ನಪ್ಪಿದ್ದರು) ಮರಳಿ ತರುವರೇ? ಆ ಶಕ್ತಿ ಅವರಿಗಿದೆಯೇ? ಆದರೆ ಅಂತಹ ಅನ್ಯಾಯ ಮರುಕಳಿಸದ ಹಾಗೆ ನೋಡಿಕೊಳ್ಳಲಷ್ಟೇ ಅವರಿಗೆ ಸಾಧ್ಯ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT