ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಂಗದಿಂದ ರಕ್ಷಿಸಲಾದ ಕಾರ್ಮಿಕರಿಗೆ ಏಮ್ಸ್‌ನಲ್ಲಿ ಆರೋಗ್ಯ ತಪಾಸಣೆ

Published 29 ನವೆಂಬರ್ 2023, 14:25 IST
Last Updated 29 ನವೆಂಬರ್ 2023, 14:25 IST
ಅಕ್ಷರ ಗಾತ್ರ

ಲಖನೌ: ಸುರಂಗದಿಂದ ರಕ್ಷಿಸಲಾದ ಕಾರ್ಮಿಕರನ್ನು ಋಷಿಕೇಶದಲ್ಲಿ ಇರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಏಮ್ಸ್‌) ಬುಧವಾರ ಕರೆತರಲಾಯಿತು. ಮುನ್ನೆಚ್ಚರಿಕೆಯ ಕ್ರಮವಾಗಿ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಸುರಂಗದಿಂದ ಹೊರತಂದ ತಕ್ಷಣ ಅವರನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ನಂತರ ಅವರನ್ನು ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಮೂಲಕ ಏಮ್ಸ್‌ಗೆ ಕರೆತರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಕಾರ್ಮಿಕರ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರು ಕೂಲಂಕಷವಾಗಿ ತಪಾಸಣೆ ನಡೆಸಲಿದ್ದಾರೆ ಎಂದು ಏಮ್ಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರ್ಮಿಕರೆಲ್ಲ ಆರೋಗ್ಯವಾಗಿರುವಂತೆ ಕಾಣುತ್ತಿದೆ ಎಂದೂ ಅವರು ತಿಳಿಸಿದ್ದಾರೆ. ಕಾರ್ಮಿಕರ ವರ್ತನೆ, ರಕ್ತದ ಒತ್ತಡ, ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಹಾಗೂ ಇತರ ಎಲ್ಲ ಆರೋಗ್ಯ ಸೂಚಕಗಳು ಸಹಜವಾಗಿ ಇವೆ ಎಂದು ಹೇಳಿದ್ದಾರೆ. ಅಗತ್ಯ ಕಂಡುಬಂದರೆ ಹೆಚ್ಚಿನ ತಪಾಸಣೆ ನಡೆಸಲಾಗುತ್ತದೆ ಎಂದಿದ್ದಾರೆ. ಕಾರ್ಮಿಕರನ್ನು ಮನಃಶಾಸ್ತ್ರಜ್ಞರು ಕೂಡ ಪರೀಕ್ಷಿಸಲಿದ್ದಾರೆ. ಕಾರ್ಮಿಕರನ್ನು ಒಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. 

ಇದಕ್ಕೂ ಮೊದಲು  ಕಾರ್ಮಿಕರನ್ನು ಚಿನ್ಯಾಲಿಸೌರ್‌ದಲ್ಲಿನ  ಆರೋಗ್ಯ ಕೇಂದ್ರದಲ್ಲಿ ಭೇಟಿ ಮಾಡಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ಪ್ರತಿಯೊಬ್ಬರಿಗೂ ₹1 ಲಕ್ಷ ಮೊತ್ತದ ಚೆಕ್‌ ವಿತರಿಸಿದರು.

ಆಸ್ಪತ್ರೆಯ ಹೊರಭಾಗದಲ್ಲಿ ಕಾಯುತ್ತಿದ್ದ ಕಾರ್ಮಿಕರ ಕುಟುಂಬ ಸದಸ್ಯರೊಂದಿಗೆ ಅವರು ಮಾತುಕತೆ ನಡೆಸಿದರು. ಯಂತ್ರದ ನೆರವಿಲ್ಲದೆ ಸುರಂಗ ಕೊರೆದ ಕಾರ್ಮಿಕರಿಗೂ ತಲಾ ₹50,000 ಬಹುಮಾನ ಘೋಷಿಸಿದರು.

ನವೆಂಬರ್‌ 12ರಂದು ನಿರ್ಮಾಣ ಹಂತದ ಸುರಂಗ ಕುಸಿದು ಉತ್ತರಪ್ರದೇಶ, ಜಾರ್ಖಂಡ್‌, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಉತ್ತರಾಖಂಡ ಮತ್ತು ಅಸ್ಸಾಂನ 41 ಕಾರ್ಮಿಕರು ಸಿಲುಕಿಕೊಂಡಿದ್ದರು. ಮಂಗಳವಾರ ಅವರನ್ನು ರಕ್ಷಿಸಲಾಗಿತ್ತು.

ಚಾರ್ ಧಾಮ್‌ ರಸ್ತೆ ಯೋಜನೆಯಡಿ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರಾದಿಂದ ಡಂಡಾಲ್‌ಗಾಂವ್‌ವರೆಗೆ 4.5 ಕಿಮೀ ಉದ್ದದ ಸುರಂಗ ನಿರ್ಮಾಣವಾಗುತ್ತಿದೆ. ಈ ಸುರಂಗವು ಉತ್ತರಕಾಶಿ ಮತ್ತು ಯಮುನೋತ್ರಿಯ ಅಂತರವನ್ನು 26 ಕಿಮೀಯಷ್ಟು ಕಡಿಮೆ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT