ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೀತಾರಾಮ್ ಯೆಚೂರಿ ಮಾರ್ಕ್ಸ್‌ವಾದಿ ಗಾರುಡಿಗ

ಡಾ.ಪ್ರಕಾಶ್‌ ಕೆ.
Published : 12 ಸೆಪ್ಟೆಂಬರ್ 2024, 21:13 IST
Last Updated : 12 ಸೆಪ್ಟೆಂಬರ್ 2024, 21:13 IST
ಫಾಲೋ ಮಾಡಿ
Comments

ಸೀತಾರಾಮ್‌ ಯೆಚೂರಿ ಅವರು ಹಲವು ರೀತಿಯಲ್ಲಿ ಬಣ್ಣಿಸಬಹುದಾದ ಬಹುಮುಖಿ ವ್ಯಕ್ತಿತ್ವದ ಮೇಧಾವಿ. ಭಾರತದ ಕಮ್ಯುನಿಸ್ಟ್‌ ರಾಜಕಾರಣದ ಮುಂಚೂಣಿ ನಾಯಕ. ಅವರು ಪ್ರಖರ ವಾಗ್ಮಿ, ಮಾರ್ಕ್ಸ್‌ವಾದಿ ಚಿಂತಕ, ಬರಹಗಾರ, ಸ್ನೇಹಮಯಿ ಎಲ್ಲವೂ ಆಗಿದ್ದರು. ಎಲ್ಲ ಪಕ್ಷಗಳ ನಾಯಕರೂ ಪ್ರೀತಿಸುತ್ತಿದ್ದ ಸರಳ ವ್ಯಕ್ತಿತ್ವ ಅವರದಾಗಿತ್ತು. ಅತ್ಯಂತ ಶ್ರೀಮಂತ ಮತ್ತು ಪ್ರಬಲವರ್ಗದ ಕುಟುಂಬದಲ್ಲಿ ಹುಟ್ಟಿದ್ದರೂ, ಬಡವ-ಶ್ರೀಮಂತ, ಪ್ರಬಲ-ದುರ್ಬಲ ವರ್ಗ ಎಂಬ ಅಸಮಾನತೆ ಹೋಗಲಾಡಿಸಲು ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು. ಆದರ್ಶ ರೀತಿಯಲ್ಲಿ ಬದುಕಿದ ಅವರು, ದೇಹವನ್ನು ಆಸ್ಪತ್ರೆಗೆ ದಾನ ಮಾಡುವ ಮೂಲಕ ಬದುಕು ಮುಗಿದ ನಂತರವೂ ಆದರ್ಶ ಮೆರೆದಿದ್ದಾರೆ.

ಸೋವಿಯತ್‌ ಒಕ್ಕೂಟ ವಿಘಟನೆಯಾಗಿ ಜಾಗತಿಕ ಮಟ್ಟದಲ್ಲಿ ಕಮ್ಯುನಿಸ್ಟ್‌ ಚಳವಳಿಗೆ ಹಿನ್ನಡೆಯಾದ ಸಂದರ್ಭದಲ್ಲಿ, ಭಾರತದಲ್ಲಿ ಆ ಹಿನ್ನಡೆಯನ್ನು ದೃಢವಾಗಿ ಎದುರಿಸುವ ಸೈದ್ಧಾಂತಿಕ ಸ್ಪಷ್ಟತೆಯನ್ನು ರೂಪಿಸುವಲ್ಲಿ ಯೆಚೂರಿಯವರ ಕೊಡುಗೆ ಅಪಾರವಾದುದು. ಭಾರತದಲ್ಲಿ ಕಮ್ಯುನಿಸ್ಟ್‌ ಚಳವಳಿಯ ಏರಿಳಿತಗಳ ನಡುವೆ ಸಿಪಿಎಂ ನಾವೆಯನ್ನು ಮುನ್ನಡೆಸುವಲ್ಲಿ ಯೆಚೂರಿಯವರು ತೋರಿದ ಮುತ್ಸದ್ದಿತನವನ್ನು ಮರೆಯಲು ಸಾಧ್ಯವೇ ಇಲ್ಲ.

ಸೀತಾರಾಮ್‌ ಯೆಚೂರಿ ಅವರು ಕರ್ನಾಟಕದೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ನಾನು ಎಸ್ಎಫ್ಐ ರಾಜ್ಯದ ಮುಖಂಡನಾಗಿದ್ದಾಗ 1992ರಲ್ಲಿ ಬೆಂಗಳೂರಿನ ಪುರಭವನದಲ್ಲಿ ನಡೆದ ಶೈಕ್ಷಣಿಕ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದ್ದರು. ನಂತರ ರಾಜ್ಯದಲ್ಲಿ ವಿದ್ಯಾರ್ಥಿ ಸಮ್ಮೇಳನಗಳು ಯಾವುದೇ ನಡೆದರೂ ಸೀತಾರಾಮ್‌ ಕಾಯಂ ಭಾಷಣಗಾರರಾಗಿರಬೇಕೆಂಬ ಪರಿಸ್ಥಿತಿ ಇತ್ತು. 

ರಾಜಕೀಯ ವಲಯದಲ್ಲಿ ಯೆಚೂರಿ ಜನಾನುರಾಗಿದ್ದರು. ಎಲ್ಲ ಪಕ್ಷಗಳ ಮುಖಂಡರೂ ಅವರನ್ನು ಪ್ರೀತಿಸುತ್ತಿದ್ದರು.‌ ಇತ್ತೀಚೆಗೆ ಎರಡು ಬಾರಿ ಅವರು ಬೆಂಗಳೂರಿಗೆ ಭೇಟಿ ನೀಡಿದ್ದರು. ಒಂದು ಬಾರಿ ‘ಇಂಡಿಯಾ‘ ಕೂಟದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು. ಮತ್ತೊಂದು ಬಾರಿ ರಾಮಕೃಷ್ಣ ಹೆಗಡೆ ಅವರ ಜನ್ಮದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ್ದರು. ಕಾಂಗ್ರೆಸ್‌ ಮುಖಂಡ ಶ್ರೀಕಂಠಯ್ಯನವರ ವಿಶೇಷ ಮುತುವರ್ಜಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಮಾತುಕತೆ ನಡೆದ ಸಂದರ್ಭದಲ್ಲಿ ನಾನೂ ಜೊತೆಯಲ್ಲಿದ್ದೆ. ರಾಜಕೀಯ ಮತ್ತು ಸೈದ್ಧಾಂತಿಕ ಕಣ್ಣೋಟಗಳನ್ನು ಹೊಂದಲು ಎಲ್ಲಾ ಪಕ್ಷಗಳ ನಾಯಕರೂ ಅವರನ್ನು ಭೇಟಿಯಾಗುತ್ತಿದ್ದರು.

ಕಾಮ್ರೇಡ್‌ ಯೆಚೂರಿ ಅವರ ನಿರ್ಗಮನವು ರಾಷ್ಟ್ರ ರಾಜಕಾರಣದ ಸಂಕಷ್ಟದ ಸಮಯದಲ್ಲಿನ ನಿರ್ವಾತದ ಸಂಕೇತವೂ ಆಗಿದೆ. ಈ ಸಮಯದಲ್ಲಿ ಅವರು ಬಿಟ್ಟು ಹೋಗಿರುವ ಆದರ್ಶಗಳು, ಆಶಯಗಳನ್ನು ಮುಂದುವರಿಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮುಂದಿದೆ.

ಲೇಖಕ: ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT