ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲನಾ ಪರವಾನಗಿ | ಕಾನೂನಿನಲ್ಲಿ ಬದಲಾವಣೆ ಅಗತ್ಯವೇ: ಸುಪ್ರೀಂಕೋರ್ಟ್‌

Published 13 ಸೆಪ್ಟೆಂಬರ್ 2023, 14:29 IST
Last Updated 13 ಸೆಪ್ಟೆಂಬರ್ 2023, 14:29 IST
ಅಕ್ಷರ ಗಾತ್ರ

ನವದೆಹಲಿ: ಲಘು ಮೋಟಾರು ವಾಹನದ ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿಯು ನಿರ್ದಿಷ್ಟ ತೂಕದ ಸಾರಿಗೆ ವಾಹನವನ್ನು ಕಾನೂನುಬದ್ಧವಾಗಿ ಚಲಾಯಿಸುವುದಕ್ಕೆ ಸಂಬಂಧಿಸಿದಂತೆ ಕಾನೂನಿನಲ್ಲಿ ಏನಾದರೂ ಬದಲಾವಣೆ ತರುವ ಅಗತ್ಯವಿದೆಯೇ ಎಂದು ಸುಪ್ರೀಂಕೋರ್ಟ್‌ ಬುಧವಾರ ಕೇಂದ್ರ ಸರ್ಕಾರವನ್ನು ಕೇಳಿದೆ.

ಇದು ನೀತಿ ನಿರೂಪಣೆಗೆ ಸಂಬಂಧಿಸಿದ ವಿಷಯವಾಗಿದ್ದು, ಲಕ್ಷಾಂತರ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸರ್ಕಾರ ಈ ವಿಷಯವನ್ನು ಹೊಸದಾಗಿ ನೋಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ತಿಳಿಸಿತು.

ಈ ಕುರಿತು ಕೇಂದ್ರ ಸರ್ಕಾರ ಎರಡು ತಿಂಗಳಲ್ಲಿ ನಿರ್ಧಾರವನ್ನು ಅಂತಿಮಗೊಳಿಸಿ, ನ್ಯಾಯಪೀಠಕ್ಕೆ ತಿಳಿಸುವಂತೆ ಪೀಠ ಸೂಚಿಸಿತು.

ರಸ್ತೆ ಸುರಕ್ಷತೆ ಮತ್ತು ಸಾರ್ವಜನಿಕ ಸಾರಿಗೆಯ ಇತರ ಬಳಕೆದಾರರ ಸುರಕ್ಷತೆಯ ಕಾಳಜಿಯನ್ನು ಗಣನೆಗೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳುವಂತೆ ಪೀಠ ಹೇಳಿತು.

ಲಘು ಮೋಟಾರು ವಾಹನದ ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿಗೆ ನಿರ್ದಿಷ್ಟ ತೂಕದ ಸಾರಿಗೆ ವಾಹನವನ್ನು ಕಾನೂನುಬದ್ಧವಾಗಿ ಚಲಾಯಿಸಲು ಅರ್ಹತೆ ಇದೆಯೇ ಎಂಬ ಕಾನೂನು ಪ್ರಶ್ನೆ ತಮ್ಮ ಎದುರು ಬಂದಿದ್ದು, ಅದನ್ನು ಪರಿಹರಿಸಲು ನೆರವಾಗುವಂತೆ ಈ ಹಿಂದಿನ ವಿಚಾರಣೆ ವೇಳೆ ಪೀಠವು ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಅವರನ್ನು ಕೇಳಿತ್ತು.

ಮುಕುಂದ್‌ ದೇವಾಂಗನ್‌ ವರ್ಸಸ್‌ ಓರಿಯಂಟಲ್‌ ಇನ್ಶುರೆನ್ಸ್‌ ಕಂಪನಿ ಲಿಮಿಟೆಡ್‌ ಪ್ರಕರಣದಲ್ಲಿ 2017ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನಲ್ಲಿ ಹೇಳಿರುವ ಅಂಶಗಳಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ ಎಂಬುದನ್ನು ಪೀಠದ ಗಮನಕ್ಕೆ ತರಲಾಯಿತು. ಈ ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಭಿಪ್ರಾಯ ತಿಳಿದುಕೊಳ್ಳಬೇಕಿದೆ ಎಂದು ಪೀಠ ಹೇಳಿತು.

ಮುಕುಂದ್‌ ದೇವಾಂಗನ್‌ ಪ್ರಕರಣದಲ್ಲಿ, ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠವು 7,500 ಕೆ.ಜಿ ಮೀರದ ಸಾರಿಗೆ ವಾಹನಗಳನ್ನು ಕೂಡ ಎಲ್‌ಎಂವಿ ಎಂದೇ ಪರಿಗಣಿಸಬಹುದು ಎಂದು ತೀರ್ಪು ನೀಡಿತ್ತು.

‘ದೇವಾಂಗನ್‌ ತೀರ್ಪು ಆಧರಿಸಿ ದೇಶದಲ್ಲಿ ಲಕ್ಷಾಂತರ ಚಾಲಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಸಾಂವಿಧಾನಿಕ ಸಮಸ್ಯೆ ಅಲ್ಲ. ಬದಲಿಗೆ ಕಾನೂನಾತ್ಮಕ ಸಮಸ್ಯೆಯಾಗಿದೆ’ ಎಂದು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಪಿ.ಎಸ್. ನರಸಿಂಹ, ಪಂಕಜ್ ಮಿಥಾಲ್ ಮತ್ತು ಮನೋಜ್ ಮಿಶ್ರಾ ಅವರನ್ನೂ ಒಳಗೊಂಡ ಪೀಠ  ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT