ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲಿಜಿಯಂ ಶಿಫಾರಸು ಅನುಷ್ಠಾನ ವಿಳಂಬ: ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

Published 7 ಅಕ್ಟೋಬರ್ 2023, 9:34 IST
Last Updated 7 ಅಕ್ಟೋಬರ್ 2023, 9:34 IST
ಅಕ್ಷರ ಗಾತ್ರ

ನವದೆಹಲಿ: ನ್ಯಾಯಮೂರ್ತಿಗಳ ನೇಮಕ ಹಾಗೂ ವರ್ಗಾವಣೆ ಸಂಬಂಧ ಕೊಲಿಜಿಯಂ ಶಿಫಾರಸು ಮಾಡಿರುವ ಹೆಸರುಗಳನ್ನು ಅಂತಿಮಗೊಳಿಸಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿ ಸೇರಿ ಒಟ್ಟು ಎರಡು ಅರ್ಜಿಗಳನ್ನು ಸೋಮವಾರ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಲಿದೆ.

ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್ ಕೌಲ್‌ ಹಾಗೂ ಸುಧಾಂಶು ಧುಲಿಯಾ ಅವರಿರುವ ಪೀಠ ಈ ಆರ್ಜಿಗಳನ್ನು ಅ.9 ರಂದು ವಿಚಾರಣೆ ನಡೆಸಲಿದೆ.

ಸೆ. 26 ರಂದು ಈ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ನ್ಯಾಯಾಧೀಶರ ನೇಮಕದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿತ್ತು. ಅಲ್ಲದೆ ತಮ್ಮ ಅಧಿಕಾರ ಉಪಯೋಗಿಸಿ ಈ ಸಮಸ್ಯೆಯನ್ನು ಬಗೆಹರಿಸಿ ಎಂದು ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಅವರನ್ನು ಕೇಳಿತ್ತು.

‘ಕಳೆದ ವಾರದವರೆಗೆ ಒಟ್ಟು 80 ಶಿಫಾರಸುಗಳು ಬಾಕಿ ಇದ್ದವು. ಬಳಿಕ 10 ಶಿಫಾರಸುಗಳನ್ನು ಸ್ವೀಕರಿಸಲಾಗಿದೆ. ಈಗ 70 ಬಾಕಿ ಇದ್ದು, ಇದರಲ್ಲಿ ನ್ಯಾಯಾಧೀಶರ ವರ್ಗಾವಣೆಯ 26 ಶಿಫಾರಸುಗಳು, 7 ಪುನರಾವರ್ತಿತ ಶಿಫಾರಸುಗಳು, ಕೊಲಿಜಿಯಂಗೆ ಮರಳಿಸದೆ ಬಾಕಿ ಇರುವ 9 ಶಿಫಾರಸುಗಳು ಹಾಗೂ ಸೂಕ್ಷ್ಮ ಹೈಕೋರ್ಟ್‌ಗೆ ಮುಖ್ಯನ್ಯಾಯಮೂರ್ತಿ ನೇಮಕ ಮಾಡುವ ಒಂದು ಶಿಫಾರಸು ಬಾಕಿ ಉಳಿದಿದೆ’ ಎಂದು ಕೋರ್ಟ್‌ ಹೇಳಿತ್ತು.

ಈ ಎಲ್ಲಾ ಶಿಫಾರಸುಗಳು ಕಳೆದ ವರ್ಷ ನವೆಂಬರ್‌ನಿಂದಲೇ ಬಾಕಿ ಉಳಿದಿದೆ ಎಂದು ಕೋರ್ಟ್ ಬೇಸರ ವ್ಯಕ್ತಪಡಿಸಿತ್ತು.

ಹೈಕೋರ್ಟ್‌ಗೆ ನೇಮಕ ಮಾಡಲು ಬಾಕಿ ಇರುವ ಶಿಫಾರಸುಗಳ ಬಗ್ಗೆ ಮಾಹಿತಿ ನೀಡಲು ಒಂದು ವಾರದ ಸಮಯವನ್ನು ಅಟಾರ್ನಿ ಜನರಲ್ ಕೋರಿದ್ದರು.

‘ಇವತ್ತು ಅಟಾರ್ನಿ ಜನರಲ್‌ ಅವರು ಕಡಿಮೆ ಅವಧಿ ತೆಗೆದುಕೊಂಡಿದ್ದಾರೆ. ಹೀಗಾಗಿ ನಾನು ಸುಮ್ಮನಿದ್ದೇನೆ. ಮುಂದಿನ ಬಾರಿ ಸುಮ್ಮನಿರುವುದಿಲ್ಲ. ನಿಮ್ಮ ಅಧಿಕಾರವನ್ನು ಬಳಸಿ ಸಮಸ್ಯೆಯನ್ನು ಬಗೆಹರಿಸಿ’ ಎಂದು ನ್ಯಾಯಮೂರ್ತಿ ಕೌಲ್‌ ಅವರು ಅಟಾರ್ನಿ ಜನರಲ್‌ ಅವರಿಗೆ ಹೇಳಿದ್ದರು.

ಕೊಲಿಜಿಯಂ ವ್ಯವಸ್ಥೆ ಮೂಲಕ ನ್ಯಾಯಾಧೀಶರ ನೇಮಕದ ಬಗ್ಗೆ ಸುಪ್ರೀಂ ಕೋರ್ಟ್‌ ಹಾಗೂ ಕೇಂದ್ರ ಸರ್ಕಾರದ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು, ಭಾರಿ ಚರ್ಚಗೆ ಕೂಡ ಗ್ರಾಸವಾಗಿದೆ.

2021ರ ಸುಪ್ರೀಂ ಕೋರ್ಟ್‌ ತೀರ್ಪಿನ ಹೊರೆಯಾಗಿಯೂ ಕಾಲಮಿತಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಆರೋ‍‍ಪಿಸಿ ಕೇಂದ್ರ ಕಾನೂನು ಹಾಗೂ ನ್ಯಾಯ ಇಲಾಖೆ ವಿರುದ್ಧ ಬೆಂಗಳೂರು ವಕೀಲರ ಸಂಘ ದಾಖಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ಕೂಡ ಅಂದೇ ವಿಚಾರಣೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT