ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಮಿಳು ಪತ್ರಕರ್ತನ ಮೇಲೆ ಕತ್ತಿಯಿಂದ ಹಲ್ಲೆ

Published 25 ಜನವರಿ 2024, 16:26 IST
Last Updated 25 ಜನವರಿ 2024, 16:26 IST
ಅಕ್ಷರ ಗಾತ್ರ

ಚೆನ್ನೈ: ತಮಿಳು ಸುದ್ದಿವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿರುವ, ತಿರುಪುರದ ಪತ್ರಕರ್ತ ನೇಸ ಪ್ರಭು ಅವರ ಮೇಲೆ ಆರು ಮಂದಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದವರ ಗುರುತು ಪತ್ತೆಯಾಗಿಲ್ಲ. ಪ್ರಭು ಅವರನ್ನು, ಅವರ ಮನೆಯಿಂದ ಬೆನ್ನತ್ತಿ ಹೋದ ದುಷ್ಕರ್ಮಿಗಳು, ಅಡ್ಡಗಟ್ಟಿ, ಕತ್ತಿಯಿಂದ ಹಲ್ಲೆ ಮಾಡಿದ್ದಾರೆ.

ಪತ್ರಕರ್ತ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲ್ಲೆ ನಡೆಸಿದವರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭರವಸೆ ನೀಡಿದ್ದಾರೆ.

ತಿರುಪುರ ಜಿಲ್ಲೆಯ ಪಲ್ಲಾಡಂನಲ್ಲಿ ಇರುವ ತಮ್ಮ ಮನೆಯ ಸನಿಹದಲ್ಲಿ ಜನವರಿ 24ರ ರಾತ್ರಿ ಪ್ರಭು ಮೇಲೆ ಹಲ್ಲೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಕೊಯಮತ್ತೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಮೈಮೇಲೆ 62 ಕಡೆ ಗಾಯಗಳಾಗಿವೆ ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.

ಬುಧವಾರ ರಾತ್ರಿ 9ರ ಸುಮಾರಿಗೆ ಈ ಘಟನೆ ನಡೆದಿದೆ. ಇದಕ್ಕೆ ನಾಲ್ಕು ತಾಸುಗಳ ಮೊದಲು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದ ಪ್ರಭು ಅವರು, ತಮ್ಮ ಹಳ್ಳಿಗೆ ಇಬ್ಬರು ವ್ಯಕ್ತಿಗಳು ನೋಂದಣಿ ಸಂಖ್ಯೆ ಇಲ್ಲದ ವಾಹನದಲ್ಲಿ ಬಂದಿದ್ದಾರೆ, ಅವರು ತಮ್ಮ ಬಗ್ಗೆ ವಿಚಾರಿಸಿದ್ದಾರೆ ಎಂದು ತಿಳಿಸಿದ್ದರು. ಅಲ್ಲದೆ, ತಮಗೆ ರಕ್ಷಣೆ ಕೊಡುವಂತೆ ಕೋರಿದ್ದರು.

ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಈ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಪೊಲೀಸರು ಅಸಡ್ಡೆಯಿಂದ ವರ್ತಿಸಿದ್ದಾರೆ ಎಂದು ದೂರಿದ್ದಾರೆ. ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇಂತಹ ಘಟನೆಗಳು ಮತ್ತೆ ಆಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸಿಪಿಎಂ ರಾಜ್ಯ ಕಾರ್ಯದರ್ಶಿ ಕೆ. ಬಾಲಕೃಷ್ಣನ್ ಅವರು, ಪ್ರಭು ಅವರ ದೂರು ಆಧರಿಸಿ ಪೊಲೀಸರು ಕ್ರಮ ಕೈಗೊಂಡಿದ್ದರೆ ಈ ಹಲ್ಲೆಯನ್ನು ತಪ್ಪಿಸಬಹುದಿತ್ತು ಎಂದು ಹೇಳಿದ್ದಾರೆ. ತಪ್ಪು ಮಾಡಿರುವ ಪೊಲೀಸರ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕು ಎಂದು ಬಾಲಕೃಷ್ಣನ್ ಒತ್ತಾಯಿಸಿದ್ದಾರೆ.

ತಮಿಳುನಾಡು ಮತ್ತು ಪುದುಚೇರಿಯ ಪತ್ರಕರ್ತರು ಈ ಘಟನೆಯನ್ನು ಖಂಡಿಸಿದ್ದಾರೆ. ಅಕ್ರಮ ಚಟುವಟಿಕೆಗಳನ್ನು ಬಯಲಿಗೆಳೆದ ಪ್ರಭು ಅವರು ತಮ್ಮ ಜೀವಕ್ಕೆ ಬೆದರಿಕೆ ಇದೆ ಎಂಬ ಸಂಗತಿಯನ್ನು ಪೊಲೀಸರ ಗಮನಕ್ಕೆ ತಂದಿದ್ದರೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿಲ್ಲ ಎಂದು ಪತ್ರಕರ್ತರು ದೂರಿದ್ದಾರೆ. ತಮಿಳುನಾಡಿನ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ.

ಪ್ರಭು ಅವರು ಸಹಾಯ ಕೋರಿ ಪೊಲೀಸರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದ ಆಡಿಯೊ ತುಣುಕನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಲವರು ಹಂಚಿಕೊಂಡಿದ್ದಾರೆ. ಪ್ರಭು ಅವರು ಅದೆಷ್ಟು ಭಯಭೀತರಾಗಿದ್ದರು ಎಂಬುದನ್ನು ಈ ಆಡಿಯೊ ತುಣುಕಿನಲ್ಲಿ ಇರುವ ಸಂಭಾಷಣೆಯು ಹೇಳುತ್ತಿದೆ.

ಸಂಬಂಧಪಟ್ಟ ಪೊಲೀಸ್ ಇನ್‌ಸ್ಟೆಕ್ಟರ್‌ ಅವರನ್ನು ವರ್ಗಾಯಿಸಿ, ಕಡ್ಡಾಯ ಕಾಯುವಿಕೆ ಅವಧಿಯಲ್ಲಿ ಇರಿಸುವಂತೆ ಸ್ಟಾಲಿನ್‌ ಸೂಚಿಸಿದ್ದಾರೆ. ಅಲ್ಲದೆ, ಪ್ರಭು ಅವರಿಗೆ ₹3 ಲಕ್ಷ ನೆರವು ಒದಗಿಸುವಂತೆ ಆದೇಶಿಸಿದ್ದಾರೆ. 

ರಾಜ್ಯ ಸರ್ಕಾರದ ಮಾಲೀಕತ್ವದಲ್ಲಿರುವ ಮದ್ಯ ಮಾರಾಟ ಮಳಿಗೆಗಳು ಪಲ್ಲಾಡಂ ಪ್ರದೇಶದಲ್ಲಿ ನಿಗದಿತ ಅವಧಿಗೂ ಮೀರಿ ತೆರೆದಿರುತ್ತವೆ ಎಂದು ಪ್ರಭು ಅವರು ಕಳೆದ ಕೆಲವು ದಿನಗಳಲ್ಲಿ ವರದಿ ಮಾಡಿದ್ದರು. ಪ್ರಭು ಅವರು ಬುಧವಾರ ಸಂಜೆ 4 ಗಂಟೆಯ ಹೊತ್ತಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು. ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸುವಂತೆ ಸೂಚಿಸಲಾಗಿತ್ತು ಎಂದು ಗೊತ್ತಾಗಿದೆ.

ದುಷ್ಕರ್ಮಿಗಳು ಅಟ್ಟಿಸಿಕೊಂಡು ಬರುತ್ತಿದ್ದಾಗ ಪ್ರಭು ಅವರು ಪೊಲೀಸರಿಗೆ ದೂರವಾಣಿಯ ಮೂಲಕ ಆ ಬಗ್ಗೆ ಮಾಹಿತಿ ನೀಡುತ್ತಿದ್ದರು ಎನ್ನಲಾಗಿದೆ. ‘ಸರ್, ಅವರು ಬಂದಿದ್ದಾರೆ’ ಎಂದು ಪ್ರಭು ಹೇಳಿದ್ದಾರೆ. ‘ಏನು ಹೇಳ್ತಾ ಇದ್ದೀರಿ’ ಎಂದು ಪೊಲೀಸ್ ಸಿಬ್ಬಂದಿ ಪ್ರಶ್ನಿಸಿದ್ದಾರೆ. ‘ನಾನು ಸ್ಟೇಷನ್‌ಗೆ ಬರುತ್ತಿದ್ದೇನೆ. ದಯವಿಟ್ಟು ಬನ್ನಿ. ಐದು ಕಾರುಗಳು ನನಗೆ ಕಾಣುತ್ತಿವೆ. ಅವರು ಬಂದಿದ್ದಾರೆ. ನನ್ನ ಜೀವನ ಮುಗೀತು’ ಎಂದು ಪ್ರಭು ಅವರು ಪೊಲೀಸರಲ್ಲಿ ಹೇಳಿದ್ದಾರೆ. ಇದಾದ ನಂತರದಲ್ಲಿ ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT