ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಎಲ್‌.ಸಂತೋಷ್‌ ಬಂಧನಕ್ಕೆ ತೆಲಂಗಾಣ ಹೈಕೋರ್ಟ್‌ ತಡೆ

Last Updated 19 ನವೆಂಬರ್ 2022, 15:21 IST
ಅಕ್ಷರ ಗಾತ್ರ

ಹೈದರಾಬಾದ್‌: ಭಾರತ್‌ ರಾಷ್ಟ್ರ ಸಮಿತಿಯ (ಬಿಆರ್‌ಎಸ್‌) ಶಾಸಕರನ್ನು ಖರೀದಿಸಲು ಪ್ರಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಅವರನ್ನು ಬಂಧಿಸಲು ಮುಂದಾಗಿದ್ದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕ್ರಮಕ್ಕೆ ತೆಲಂಗಾಣ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಮುಂದಿನ ಆದೇಶದವರೆಗೂ ಸಂತೋಷ್‌ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್‌ ಶನಿವಾರ ಹೇಳಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಹೈದರಾಬಾದ್‌ನಲ್ಲಿ ಸೋಮವಾರ (ನ.21) ವಿಚಾರಣೆಗೆ ಹಾಜರಾಗುವಂತೆ ಸಂತೋಷ್‌ ಅವರ ಮಲ್ಲೇಶ್ವರ ವಿಳಾಸಕ್ಕೆ ಇದೇ 16ರಂದು ನೋಟಿಸ್‌ ರವಾನಿಸಿತ್ತು.

‘ಪ್ರಸ್ತುತ ತನಿಖೆಗೆ ಸಂಬಂಧಿಸಿದಂತೆ ನಿಮ್ಮನ್ನು ವಿಚಾರಣೆಗೆ ಒಳಪಡಿಸಬೇಕಿದೆ. ನಿಮ್ಮಿಂದ ಕೆಲ ಮಾಹಿತಿಗಳನ್ನು ಪಡೆದುಕೊಳ್ಳಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷ್ಯ ನಾಶಕ್ಕೆ ಮುಂದಾಗಬಾರದು. ಒಂದೊಮ್ಮೆ ಎಸ್‌ಐಟಿ ಎದುರು ತನಿಖೆಗೆ ಹಾಜರಾಗಲು ವಿಫಲರಾದರೆ ನಿಮ್ಮನ್ನು ಬಂಧಿಸಲಾಗುತ್ತದೆ’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು.

ಎಸ್‌ಐಟಿಯ ಈ ಕ್ರಮವನ್ನುಬಿಜೆಪಿ ತೆಲಂಗಾಣ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೇಮೆಂದರ್‌ ರೆಡ್ಡಿ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಸಂತೋಷ್‌ ಅವರ ಬಂಧನಕ್ಕೆ ಮಧ್ಯಂತರ ತಡೆ ನೀಡಿದೆ.

ಎಸ್‌ಐಟಿ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ, ಸಂತೋಷ್‌ ಅವರಿಗೆ ನೋಟಿಸ್‌ ನೀಡಿರುವ ವಿಚಾರದಲ್ಲಿ ಎಸ್ಐಟಿಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ದೆಹಲಿ ಪೊಲೀಸರಿಗೆ ನಿರ್ದೇಶಿಸಿದೆ. ಅರ್ಜಿಯ ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಿದೆ.

ಬಿಜೆಪಿಯ ಏಜೆಂಟರು ಎನ್ನಲಾಗಿರುವ ದೆಹಲಿಯ ಮೂವರು ವ್ಯಕ್ತಿಗಳು ಹಾಗೂ ಬಿಆರ್‌ಎಸ್‌ ಶಾಸಕರ ನಡುವಣ ವಿಡಿಯೊ ಸಂವಾದದಲ್ಲಿ ಸಂತೋಷ್‌ ಅವರ ಹೆಸರು ಹಲವು ಬಾರಿ ಉಲ್ಲೇಖವಾಗಿತ್ತು. ಈ ವಿಡಿಯೊವನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರು ಇದೇ 3ರಂದು ಬಿಡುಗಡೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT