ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆಲಂಗಾಣದ ಫಲಿತಾಂಶ ದಕ್ಷಿಣದಲ್ಲಿ ಕಾಂಗ್ರೆಸ್ ಪ್ರಾಬಲ್ಯ ತೋರಿಸುತ್ತದೆ: ಡಿಕೆಶಿ

Published 3 ಡಿಸೆಂಬರ್ 2023, 11:27 IST
Last Updated 3 ಡಿಸೆಂಬರ್ 2023, 11:27 IST
ಅಕ್ಷರ ಗಾತ್ರ

ಹೈದರಾಬಾದ್: ‘ತೆಲಂಗಾಣ ಚುನಾವಣಾ ಫಲಿತಾಂಶವು ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮುಂದುವರಿದಿರುವುದರ ಸಂಕೇತ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಮ್ಮ ಕಾರ್ಯಕರ್ತರು ಹಾಗೂ ಮತದಾರರು ಬದಲಾವಣೆ ತರಲು ತೀರ್ಮಾನ ಮಾಡಿದ್ದರು. ಹೀಗಾಗಿ ತೆಲಂಗಾಣದಲ್ಲಿ ನಿಚ್ಚಳ ಬಹುಮತ ಸಿಕ್ಕಿದೆ’ ಎಂದರು.

‘‍ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನೆರೆ ರಾಜ್ಯಗಳ ನಮ್ಮ ನಾಯಕರು ಇಲ್ಲಿ ಪ್ರತಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು, ಚುನಾವಣೆ ಫಲಿತಾಂಶದ ನಂತರ ಮುಂದಿನ ಕ್ರಮಗಳ ಬಗ್ಗೆ ನಾವು ಎಚ್ಚರಿಕೆಯಿಂದ ಇದ್ದೇವೆ. ಪ್ರತಿ ಕ್ಷೇತ್ರದಿಂದ ನಮ್ಮ ಅಭ್ಯರ್ಥಿಗಳನ್ನು ಕರೆ ತರಲು ವ್ಯವಸ್ಥೆ ಮಾಡಲಾಗಿದೆ’ ಎಂದರು.

‘ಈ ಗೆಲುವನ್ನು ನಿಮ್ಮ ವೈಯಕ್ತಿಕ ಗೆಲುವು ಎಂದು ಭಾವಿಸುತ್ತೀರಾ’ ಎಂಬ ಪ್ರಶ್ನೆಗೆ, ‘ಖಂಡಿತ ಇಲ್ಲ. ಇದು ನನ್ನ ವೈಯಕ್ತಿಕ ಗೆಲುವಲ್ಲ. ಇದು ತೆಲಂಗಾಣ ರಾಜ್ಯದ ಜನರ ಗೆಲುವು’ ಎಂದರು.

‘ತೆಲಂಗಾಣ ರಾಜ್ಯ ರಚನೆ ಮಾಡಿದ ಸೋನಿಯಾ ಗಾಂಧಿ ಅವರಿಗೆ ಈ ರಾಜ್ಯದ ಜನರು ಈ ರೀತಿ ಧನ್ಯವಾದ ಅರ್ಪಿಸಿದ್ದಾರೆ. 10 ವರ್ಷಗಳ ಆಡಳಿತ ನೋಡಿ ಇಲ್ಲಿನ ಜನ ಬೇಸತ್ತಿದ್ದರು. ಹೀಗಾಗಿ ಜನ ಅಭಿವೃದ್ಧಿ ಹಾಗೂ ಪ್ರಗತಿಯ ಬದಲಾವಣೆ ಬಯಸಿದ್ದಾರೆ. ಜನರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ’ ಎಂದರು.

‘ರೇವಂತ್ ರೆಡ್ಡಿ ಅವರನ್ನು ಈ ಗೆಲುವಿನ ರೂವಾರಿ’ ಎಂದು ಕರೆಯುತ್ತೀರಾ ಎಂದು ಕೇಳಿದಾಗ, ‘ರೇವಂತ್ ರೆಡ್ಡಿ ಅವರು ಟಿಪಿಸಿಸಿ ಅಧ್ಯಕ್ಷರು. ಅವರು ಈ ತಂಡದ ನಾಯಕರಾಗಿದ್ದರು. ನಮ್ಮ ಪಕ್ಷ ಸಾಮೂಹಿಕ ನಾಯಕತ್ವದ ಮೇಲೆ ಚುನಾವಣೆ ಮಾಡಿದ್ದು, ಪಕ್ಷ ಈ ಬಗ್ಗೆ ಸೂಕ್ತ ತೀರ್ಮಾನ ಮಾಡಲಿದೆ. ಇಂತಹ ವಿಚಾರವಾಗಿ ನಾನು ಹೆಚ್ಚು ಚರ್ಚೆ ಮಾಡುವುದಿಲ್ಲ. ನಾವು ಸಾಮಾನ್ಯ ಕಾರ್ಯಕರ್ತರಂತೆ ಕೆಲಸ ಮಾಡಿದ್ದೇವೆ. ಉಳಿದಂತೆ ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ. ಅವರ ತೀರ್ಮಾನ ಗೌರವಿಸಿ ಪಾಲಿಸುತ್ತೇವೆ’ ಎಂದು ತಿಳಿಸಿದರು.

‘ಈ ಗೆಲುವಿನ ನಂತರ ಕೆಸಿಆರ್ ಹಾಗೂ ಕೆಟಿಆರ್ ಅವರಿಗೆ ಯಾವ ಸಂದೇಶ ನೀಡುತ್ತೀರಿ’ ಎಂದು ಕೇಳಿದಾಗ, ‘ಅವರ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ಅವರು ನಮ್ಮ ಬಗ್ಗೆ ಏನೆಲ್ಲಾ ಟ್ವೀಟ್ ಮಾಡಿದ್ದರೋ ಅದಕ್ಕೆ ತೆಲಂಗಾಣ ರಾಜ್ಯದ ಜನ ಉತ್ತರ ನೀಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT