ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ಬಾಂಗ್ಲಾ ಪ್ರಜೆಗಳ ಕಳ್ಳಸಾಗಾಟ: ಆರೋಪ ಪಟ್ಟಿ ಸಲ್ಲಿಕೆ

Published 6 ಫೆಬ್ರುವರಿ 2024, 16:14 IST
Last Updated 6 ಫೆಬ್ರುವರಿ 2024, 16:14 IST
ಅಕ್ಷರ ಗಾತ್ರ

ಗುವಾಹಟಿ: ಬಾಂಗ್ಲಾದೇಶದ ಪ್ರಜೆಗಳನ್ನು ಅಕ್ರಮವಾಗಿ ಬೆಂಗಳೂರಿಗೆ ಕರೆತರುವ ಮತ್ತು ರೋಹಿಂಗ್ಯ ಸಮುದಾಯದವರಿಗೆ ದೇಶದ ವಿವಿಧ ಭಾಗಗಳಲ್ಲಿ ನೆಲೆಸಲು ನಕಲಿ ದಾಖಲೆಗಳನ್ನೂ ಸೃಷ್ಟಿಸಿಕೊಡುವ ಅಂತರರಾಷ್ಟ್ರೀಯ ಜಾಲವೊಂದು ಸಕ್ರಿಯವಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಎರಡು ನ್ಯಾಯಾಲಯಗಳಿಗೆ ಸೋಮವಾರ ಸಲ್ಲಿಸಿರುವ ಎರಡು ಪ್ರತ್ಯೇಕ ಆರೋಪಪಟ್ಟಿಯಲ್ಲಿ ತಿಳಿಸಿದೆ.

ಭಾರತದಲ್ಲಿ ಅಕ್ರಮವಾಗಿ ನೆಲೆಸಿದ ಆರೋಪ ಎದುರಿಸುತ್ತಿರುವ 36 ಮಂದಿ ವಿರುದ್ದ ಈ ಆರೋಪಪಟ್ಟಿ ಸಲ್ಲಿಸಲಾಗಿದೆ. ಮ್ಯಾನ್ಮಾರ್‌ ಮೂಲದ ರೋಹಿಂಗ್ಯಾದ ಒಬ್ಬ ನಿರಾಶ್ರಿತ ಹಾಗೂ ಬಾಂಗ್ಲಾದೇಶದ 16 ಪ್ರಜೆಗಳು ಇದರಲ್ಲಿ ಸೇರಿದ್ದಾರೆ. 

ಪಶ್ಚಿಮ ಬಂಗಾಳಕ್ಕೆ ಹೊಂದಿಕೊಂಡಿರುವ ಬೆನಪೋಲ್‌ ಮತ್ತು ಜಶೋರ್‌ ಬಳಿ ಹಾಗೂ ತ್ರಿಪುರಾದ ಅಖೌರಾ ಸಮೀಪ ಬಾಂಗ್ಲಾ– ಭಾರತ ಗಡಿಯ ಮೂಲಕ ಇವರನ್ನು ಅಕ್ರಮವಾಗಿ ಭಾರತದೊಳಗೆ ಕರೆತರಲಾಗಿತ್ತು. ಗಡಿಯ ಎರಡೂ ಭಾಗಗಳಲ್ಲಿರುವ ದಲ್ಲಾಳಿಗಳು ಇದಕ್ಕೆ ನೆರವಾಗಿದ್ದರು ಎಂದು ಎನ್‌ಐಎ ಮಂಗಳವಾರ ಹೊರಡಿಸಿದ ಪ್ರಕಟಣೆಯಲ್ಲಿ ಹೇಳಿದೆ. ಒಳ್ಳೆಯ ಉದ್ಯೋಗ ಮತ್ತು ಹೆಚ್ಚಿನ ವೇತನದ ಭರವಸೆ ನೀಡಿ ಸಂತ್ರಸ್ತರನ್ನು ಭಾರತಕ್ಕೆ ಕರೆತರಲಾಗಿದೆ.

‘ಸಂತ್ರಸ್ತರು ಗಡಿ ದಾಟಿ ಭಾರತಕ್ಕೆ ಬರಲು ದಲ್ಲಾಳಿಗಳಿಗೆ ಹಣ ಪಾವತಿಸಿದ್ದರು. ಬೆಂಗಳೂರಿಗೆ ಕರೆತಂದ ಬಳಿಕ ಅವರನ್ನು ಕಡಿಮೆ ಕೂಲಿಯ ಕೆಲಸಕ್ಕೆ ಬಲವಂತದಿಂದ ತಳ್ಳಲಾಗುತ್ತಿತ್ತು. ಪ್ರತಿಭಟಿಸಿದವರನ್ನು ಅಕ್ರಮ ವಲಸಿಗರೆಂದು ಹೇಳಿ ಜೈಲಿಗೆ ಕಳುಹಿಸುವ ಬೆದರಿಕೆಯನ್ನು ಕಳ್ಳಸಾಗಣೆದಾರರು ಹಾಕುತ್ತಿದ್ದರು’ ಎಂದು ತಿಳಿಸಿದೆ.

ಅಸ್ಸಾಂನಲ್ಲಿ ಕಳೆದ ವರ್ಷ ದಾಖಲಾಗಿದ್ದ ಮಾನವ ಕಳ್ಳಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಮತ್ತೊಂದು ಆರೋಪಪಟ್ಟಿಯನ್ನೂ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT