ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್‌ಗೆ ಮಧುಮೇಹ ತಜ್ಞರಿಂದ ಸಮಾಲೋಚನೆ: ಎಎಪಿ ಆಕ್ರೋಶ

Published 21 ಏಪ್ರಿಲ್ 2024, 15:19 IST
Last Updated 21 ಏಪ್ರಿಲ್ 2024, 15:19 IST
ಅಕ್ಷರ ಗಾತ್ರ

ನವದೆಹಲಿ: ಜೈಲಿನಲ್ಲಿರುವ ಮಧುಮೇಹಿಗಳಿಗೆ ತಮ್ಮಲ್ಲಿ ಸಾಕಷ್ಟು ವೈದ್ಯಕೀಯ ಸೌಲಭ್ಯ ಇರುವುದಾಗಿ ಹೇಳಿದ್ದ ತಿಹಾರ್‌ ಜೈಲಿನ ಅಧಿಕಾರಿಗಳು, ಈಗ ನೋಡಿದರೆ ಏಮ್ಸ್‌ನಿಂದ ಮಧುಮೇಹ ತಜ್ಞರಿಗಾಗಿ ಕೋರಿಕೆ ಸಲ್ಲಿಸಿದ್ದಾರೆ ಎಂದು ದೆಹಲಿಯ ಸಚಿವ ಸೌರಭ್ ಭಾರದ್ವಾಜ್‌ ಭಾನುವಾರ ಆರೋಪಿಸಿದರು.

‘ಮಹಾ ನಿರ್ದೇಶಕರು (ಕಾರಾಗೃಹ) ಶನಿವಾರ ಏಮ್ಸ್‌ಗೆ ಪತ್ರ ಬರೆದು, ತಿಹಾರ್‌ಗೆ ಮಧುಮೇಹ ತಜ್ಞರನ್ನು ನಿಯೋಜಿಸುವಂತೆ ಕೋರಿದ್ದಾರೆ. 20 ದಿನಗಳಿಂದ ಅರವಿಂದ ಕೇಜ್ರಿವಾಲ್‌ ಅವರು ಈ ಜೈಲಿನಲ್ಲಿದ್ದಾರೆ. ಆದರೆ, ಈಗ ಅವರಿಗಾಗಿ ಮಧುಮೇಹ ತಜ್ಞರನ್ನು ಕೇಳುತ್ತಿದ್ದಾರೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ನ್ಯಾಯಾಂಗ ಬಂಧನದಲ್ಲಿರುವ ಕೇಜ್ರಿವಾಲ್‌ ಅವರಿಗೆ ತೊಂದರೆ ನೀಡಲು ಸಂಚು ರೂಪಿಸಲಾಗುತ್ತಿದೆ’ ಎಂಬ ಆರೋಪವನ್ನು ಭಾರದ್ವಾಜ್‌ ಪುನರುಚ್ಚರಿಸಿದರು.

ಭಾರದ್ವಾಜ್‌ ಆರೋಪಿಸಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ತಿಹಾರ್‌ ಜೈಲು ಆಡಳಿತ, ‘ದೆಹಲಿ ಮುಖ್ಯಮಂತ್ರಿ ಅವರ ಪತ್ನಿ ಸುನೀತಾ ಕೇಜ್ರಿವಾಲ್‌ ಅವರ ಕೋರಿಕೆಯ ಮೇರೆಗೆ ಏಮ್ಸ್‌ನ ಹಿರಿಯ ತಜ್ಞರ ಜತೆ ಶನಿವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಕೇಜ್ರಿವಾಲ್‌ ಅವರಿಗೆ ಸಮಾಲೋಚನೆ ನಡೆಸಲಾಯಿತು. 40 ನಿಮಿಷಗಳ ಕಾಲ ಈ ಸಮಾಲೋಚನೆ ನಡೆಯಿತು. ಗಾಬರಿ ಪಡುವಂತಹದ್ದೇನೂ ಇಲ್ಲ ಎಂದು ತಜ್ಞರು ಕೇಜ್ರಿವಾಲ್‌ ಅವರಿಗೆ ತಿಳಿಸಿದ್ದಾರೆ. ಅಲ್ಲದೆ ಸೂಚಿಸಲಾದ ಔಷಧಗಳನ್ನು ಮುಂದುವರಿಸಲು ಸಲಹೆ ನೀಡಿದ್ದಾರೆ. ಈ ಕುರಿತು ನಿಯಮಿತವಾಗಿ ಪರಿಶೀಲನೆ ಮಾಡಲಾಗುವುದು’ ಎಂದು ತಿಳಿಸಿದೆ. 

‘ಏಮ್ಸ್‌ನ ತಜ್ಞರಿಗೆ ಕೇಜ್ರಿವಾಲ್‌ ಅವರ ಸಿಜಿಎಂ (ಗ್ಲುಕೋಸ್ ಪ್ರಮಾಣ ತಿಳಿಸುವ ಸೆನ್ಸರ್) ವರದಿ ಹಾಗೂ ಅವರು ತೆಗೆದುಕೊಳ್ಳುತ್ತಿರುವ ಆಹಾರ, ಔಷಧಗಳ ವಿವರಗಳನ್ನು ಒದಗಿಸಲಾಯಿತು. ಇನ್ಸುಲಿನ್‌ ಕುರಿತು ಕೇಜ್ರಿವಾಲ್‌ ಅವರೂ ಪ್ರಸ್ತಾಪಿಸಲಿಲ್ಲ, ವೈದ್ಯರೂ ಅದು ಬೇಕೆಂದು ಸೂಚಿಸಲಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೈಕೋರ್ಟ್‌ನಲ್ಲಿ ಸೋಮವಾರ ವಿಚಾರಣೆ

ನವದೆಹಲಿ: ದೆಹಲಿ ಅಬಕಾರಿ ನೀತಿ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಗೆ ಕುರಿತು ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್‌ಗಳನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್‌ ಸೋಮವಾರ ನಡೆಸಲಿದೆ. ಈ ಪ್ರಕರಣದಲ್ಲಿ ಮಧ್ಯಂತರ ರಕ್ಷಣೆ ನೀಡಲು ಹೈಕೋರ್ಟ್‌ ನಿರಾಕರಿಸಿದ ನಂತರ ಇ.ಡಿ ಮಾರ್ಚ್‌ 21ರಂದು ಕೇಜ್ರಿವಾಲ್‌ ಅವರನ್ನು ಬಂಧಿಸಿತ್ತು. ತಮ್ಮ ಬಂಧನ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಕೆಲವು ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿರುವ ಅವರು ಜಾಮೀನು ಮಂಜೂರಾತಿಗೂ ಮನವಿ ಮಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT