ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಾಡು ವಿವಾದ | ದೇವರನ್ನು ರಾಜಕೀಯದಿಂದ ದೂರವಿಡಿ: ಸುಪ್ರೀಂ ಕೋರ್ಟ್‌

ನಾಯ್ಡು ಹೇಳಿಕೆ ಬಗ್ಗೆ ಪ್ರಶ್ನೆಗಳನ್ನೆತ್ತಿದ ‘ಸುಪ್ರೀಂ’
Published : 30 ಸೆಪ್ಟೆಂಬರ್ 2024, 12:51 IST
Last Updated : 30 ಸೆಪ್ಟೆಂಬರ್ 2024, 12:51 IST
ಫಾಲೋ ಮಾಡಿ
Comments

ನವದೆಹಲಿ: ತಿರುಪತಿ ಲಾಡು ಸಿದ್ಧಪಡಿಸಲು ಪ್ರಾಣಿಗಳ ಕೊಬ್ಬಿನ ಅಂಶ ಹೊಂದಿದ್ದ ತುಪ್ಪ ಬಳಸಲಾಗಿದೆ ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರ ಹೇಳಿಕೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ಪ್ರಶ್ನಿಸಿದ್ದು, ‘ದೇವರನ್ನಾದರೂ ರಾಜಕೀಯದಿಂದ ದೂರವಿಡಿ’ ಎಂದು ಹೇಳಿದೆ.

‘ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಕೋಟ್ಯಂತರ ಜನರ ಭಾವನೆಗಳ ಮೇಲೆ ಪರಿಣಾಮ ಬೀರುವಂತಹ ಹೇಳಿಕೆ ನೀಡಿರುವುದು ಸೂಕ್ತವಲ್ಲ’ ಎಂದು ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಹೇಳಿತು. 

ತಿರುಪತಿ ಲಾಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕೆಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಪೀಠವು ನಡೆಸಿತು.

ಮುಖ್ಯಮಂತ್ರಿ ಅವರು ಸೆಪ್ಟೆಂಬರ್‌ 18ರಂದು ಈ ಹೇಳಿಕೆ ಕೊಟ್ಟಿದ್ದರೂ, ಪ್ರಕರಣದ ಕುರಿತ ಸೆ.25ರಂದು ಎಫ್ಐಆರ್‌ ದಾಖಲಿಸಲಾಗಿದೆ. ಸೆ.26ರಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ ಎಂಬುದನ್ನು ಪೀಠವು ಗಮನಿಸಿತು.

ರಾಜ್ಯ ಸರ್ಕಾರ ನೇಮಿಸಿರುವ ಎಸ್‌ಐಟಿ ಈ ವಿವಾದದ ಕುರಿತ ತನಿಖೆಯನ್ನು ಮುಂದುವರಿಸಬೇಕೇ ಅಥವಾ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೇ ಎಂಬುದನ್ನು ನಿರ್ಧರಿಸಲು ನೆರವಾಗುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪೀಠ ಕೇಳಿಕೊಂಡಿತು. 

ಲಾಡು ಸಿದ್ಧಪಡಿಸಲು ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬುದಕ್ಕೆ ಪುರಾವೆಗಳು ಇವೆಯೇ ಎಂದು ಕೇಳಿದ ಪೀಠ, ‘ಕನಿಷ್ಠ, ದೇವರನ್ನಾದರೂ ರಾಜಕೀಯದಿಂದ ದೂರವಿಡಬೇಕೆಂದು ನಾವು ನಿರೀಕ್ಷಿಸುತ್ತೇವೆ’ ಎಂದಿತು.

ಇದು ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದ್ದು, ಲಾಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪವನ್ನು ಬಳಸಿದ್ದರೆ ಅದನ್ನು ಒಪ್ಪಲಾಗದು ಎಂದು ಮೆಹ್ತಾ, ಪೀಠಕ್ಕೆ ತಿಳಿಸಿದರು. ಪೀಠವು ಮುಂದಿನ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ನಿಗದಿಪಡಿಸಿತು. 

ರಾಜ್ಯದಲ್ಲಿ ಹಿಂದಿದ್ದ ವೈಎಸ್‌ಆರ್‌ಸಿಪಿ ಸರ್ಕಾರವು ತಿರುಪತಿಯ ಪ್ರಸಾದ ತಯಾರಿಕೆಗೆ ಅಗ್ಗದ ಬೆಲೆಯ ಕಲಬೆರಕೆ ತುಪ್ಪ ಖರೀದಿಸುವ ಮೂಲಕ ಟಿಟಿಡಿಯ ಪಾವಿತ್ರ್ಯಕ್ಕೆ ಧಕ್ಕೆ ತಂದಿದೆ ಎಂದು ಎನ್‌.ಚಂದ್ರಬಾಬು ನಾಯ್ಡು ಇತ್ತೀಚೆಗೆ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಆರೋಪ ಮಾಡಿದ್ದರು. 

ಅದಕ್ಕೆ ಪೂರಕವಾಗಿ, ಟಿಟಿಡಿಗೆ ಪೂರೈಕೆಯಾಗಿದ್ದ ತುಪ್ಪದಲ್ಲಿ ಹಂದಿ ಮತ್ತು ಇತರ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿರುವ ಕುರಿತು ಗುಜರಾತ್‌ನ ಎನ್‌ಡಿಡಿಬಿ ಪ್ರಯೋಗಾಲಯದ ವರದಿಯನ್ನು ಟಿಡಿಪಿ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT