ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿಐಎಸ್‌ಎಸ್‌: ಸಿಬ್ಬಂದಿ ವಜಾ ಆದೇಶ ವಾಪಸು

ಸಂಕಷ್ಟಕ್ಕೆ ಸಿಲುಕಿದ್ದ 100ಕ್ಕೂ ಹೆಚ್ಚು ಸಿಬ್ಬಂದಿ * ಸಂಸ್ಥೆಯ ಸಂಘಟನೆಗಳ ಖಂಡನೆ
Published 30 ಜೂನ್ 2024, 23:49 IST
Last Updated 30 ಜೂನ್ 2024, 23:49 IST
ಅಕ್ಷರ ಗಾತ್ರ

ಮುಂಬೈ: ಹಣಕಾಸು ಕೊರತೆ ಹಿನ್ನೆಲೆಯಲ್ಲಿ 100ಕ್ಕೂ ಹೆಚ್ಚು ಬೋಧಕ, ಬೋಧಕೇತರ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವುಕ್ಕೆ ಸಂಬಂಧಿಸಿದ ಸುತ್ತೋಲೆಯನ್ನು ಟಾಟಾ ಇನ್‌ಸ್ಟಿಟ್ಯೂಟ್‌ ಆಫ್ ಸೋಷಿಯಲ್‌ ಸೈನ್ಸಸ್‌ (ಟಿಐಎಸ್‌ಎಸ್‌) ಸಂಸ್ಥೆಯು ಭಾನುವಾರ ತಡರಾತ್ರಿ ಹಿಂಪಡೆದಿದೆ.

ಒಟ್ಟು 115 ಸಿಬ್ಬಂದಿಯ ನೇಮಕಾತಿ ಗುತ್ತಿಗೆ ಒಪ್ಪಂದವನ್ನು ನವೀಕರಿಸಲಾಗದು ಎಂದು ಸಂಸ್ಥೆಯು ಜೂನ್‌ 28ರಂದು ನೋಟಿಸ್‌ ನೀಡಿತ್ತು. ಸಂಸ್ಥೆಯ ಈ ಕ್ರಮವನ್ನು ಬೋಧಕ ಮತ್ತು ವಿದ್ಯಾರ್ಥಿ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದವು. ಇದು ರಾಜಕೀಯ ವಿವಾದವಾಗಿಯೂ ಮಾರ್ಪಟ್ಟಿತ್ತು.

ವರದಿಯ ಪ್ರಕಾರ, ಸಂಸ್ಥೆಯ ಮುಂಬೈ, ತುಳಜಾಪುರ, ಗುವಾಹಟಿ ಮತ್ತು ಹೈದರಾಬಾದ್‌ ಕ್ಯಾಂಪಸ್‌
ಗಳಲ್ಲಿನ 55 ಅಧ್ಯಾಪಕರು ಮತ್ತು 60 ಬೋಧಕೇತರ ಸಿಬ್ಬಂದಿ ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದರು.

‘ಟಾಟಾ ಎಜುಕೇಷನ್‌ ಟ್ರಸ್ಟ್‌ (ಟಿಇಟಿ) ಆರ್ಥಿಕ ನೆರವಿನ ಕಾರ್ಯಕ್ರಮದಡಿ ವಿವಿಧ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಗುತ್ತಿಗೆ ಆಧಾರದಲ್ಲಿ ಈ ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು. ಇವರ ನೇಮಕಾತಿ ಅವಧಿಯು ಜೂನ್‌ 30ಕ್ಕೆ ಅಂತ್ಯಗೊಳ್ಳಲಿದೆ’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು. 

‘ನಂತರದ ಬೆಳವಣಿಗೆಯಲ್ಲಿ ಟಾಟಾ ಎಜುಕೇಷನ್‌ ಟ್ರಸ್ಟ್‌ ಜೊತೆಗೆ ನಡೆದ ಚರ್ಚೆ ಫಲಪ್ರದವಾಗಿದೆ. ಸಮಸ್ಯೆಯನ್ನು ಬಗೆಹರಿಸುವ ಕ್ರಮವಾಗಿ ಆರ್ಥಿಕ ನೆರವು ನೀಡುವ ಭರವಸೆಯನ್ನು ಟ್ರಸ್ಟ್ ನೀಡಿದೆ. ಟಿಇಟಿ ಈ ಸಿಬ್ಬಂದಿಯ ವೇತನಕ್ಕಾಗಿ ಹಣ ಬಿಡುಗಡೆಗೆ ಬದ್ಧವಾಗಿದೆ’ ಎಂದು ತಿಳಿಸಿತು.

‘ಟಿಇಟಿ ಸಿಬ್ಬಂದಿಯನ್ನು ಉದ್ದೇಶಿಸಿ ಜೂನ್‌ 28ರಂದು ಬರೆದಿದ್ದ ಪತ್ರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ. ಈ ಎಲ್ಲ ಸಿಬ್ಬಂದಿಗೆ ಸೇವೆಯಲ್ಲಿ ಮುಂದುವರಿಯಲು ಕೋರಲಾಗಿದೆ. ಅವರ ವೇತನವನ್ನು ಸಂಸ್ಥೆಯಿಂದ ಅನುದಾನ ಬಿಡುಗಡೆಯಾದ ಕೂಡಲೇ ಬಿಡುಗಡೆ ಮಾಡಲಾಗುತ್ತದೆ’ ಟಿಐಎಸ್‌ಎಸ್‌ ಸಂಸ್ಥೆ ರಾತ್ರಿ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.    

ಗುತ್ತಿಗೆಯ ಅವಧಿಯನ್ನು ನವೀಕರಿಸದ ಸಂಸ್ಥೆಯ ಮೊದಲಿನ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಿಬ್ಬಂದಿಯೊಬ್ಬರು, ವಿವಿಧ ಕೋರ್ಸ್‌ಗಳಿಗೆ ಕಳೆದ 10–15 ವರ್ಷಗಳಿಂದ ಅನುದಾನ ಬಿಡುಗಡೆ ಆಗುತ್ತಿತ್ತು. ಅದನ್ನು ನವೀಕರಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು. 

‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಡಿ ಟಿಐಎಸ್‌ಎಸ್‌ನ ನೂರಾರು ಬೋಧಕ, ಬೋಧಕೇತರ ಸಿಬ್ಬಂದಿಯ ವಜಾ ಕಾರ್ಯವನ್ನು ಖಂಡಿಸುತ್ತೇವೆ’ ಎಂದು ಪ್ರಗತಿಪರ ವಿದ್ಯಾರ್ಥಿ ಸಂಘಟನೆ ಹೇಳಿದೆ. ಶಿಕ್ಷಕರು, ಸಿಬ್ಬಂದಿ ಜತೆಗೆ ಸಂಘಟನೆ ನಿಲ್ಲಲಿದೆ ಎಂದು ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

ಟಿಐಎಸ್‌ಎಸ್‌ನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿಗೆ ಕೇವಲ 48 ಗಂಟೆಗೂ ಮುನ್ನ ತಲುಪಿದ್ದ ನೋಟಿಸ್ ಆಘಾತ ಉಂಟು ಮಾಡಿತ್ತು. ಇದು ಕೇಂದ್ರ ಸರ್ಕಾರ ಮತ್ತು ಟಿಐಎಸ್‌ಎಸ್‌ ಆಡಳಿತದ ನಾಯಕತ್ವದ ವೈಫಲ್ಯವಾಗಿದೆ ಎಂದು ವಿದ್ಯಾರ್ಥಿ ಸಂಘಟನೆ ದೂರಿದೆ.

ಸಿಬ್ಬಂದಿಯನ್ನು ವಜಾಗೊಳಿಸುವ ನಡೆಯನ್ನು ಸಿಪಿಐ, ಆರ್‌ಜೆಡಿ ಪಕ್ಷಗಳು ಖಂಡಿಸಿದ್ದವು. ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಕಿತ್ತುಹಾಕುವ ‘ಅಮೃತ ಕಾಲ’ ಇದಾಗಿದೆ ಎಂದು ಸಿಪಿಐ ಖಂಡಿಸಿದ್ದರೆ, ‘ಇದರಿಂದ ಆಘತವಾಗಿದೆ ಆದರೆ ಆಶ್ಚರ್ಯವಾಗಿಲ್ಲ’ ಎಂದು ಆರ್‌ಜೆಡಿ ಪ್ರತಿಕ್ರಿಯಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT