ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಪು ಹಲ್ಲೆ ಆರೋಪಿ ಬಂಧನ: ಟಿಎಂಸಿ ಸಂಸದ ಸೌಗತ ರಾಯ್‌ಗೆ ಜೀವ ಬೆದರಿಕೆ

Published 11 ಜುಲೈ 2024, 5:17 IST
Last Updated 11 ಜುಲೈ 2024, 5:17 IST
ಅಕ್ಷರ ಗಾತ್ರ

ಕೋಲ್ಕತ್ತ: ಗುಂಪು ಹಲ್ಲೆ ಪ್ರಕರಣದ ಆರೋಪಿ ಜಯಂತ್ ಸಿಂಗ್ ಅವರನ್ನು ಬಿಡುಗಡೆ ಮಾಡಿದಿದ್ದರೆ ಕೊಲೆ ಮಾಡುವುದಾಗಿ ದೂರವಾಣಿ ಕರೆ ಮೂಲಕ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದ ಸೌಗತ ರಾಯ್ ಆರೋಪ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಅರಿಯಾದಹ ಪ್ರದೇಶದ ಟಿಎಂಸಿ ನಾಯಕ ಜಯಂತ್‌ ಸಿಂಗ್, ಜೂನ್ 30 ರಂದು ನಡೆದ ಗುಂಪು ಹಲ್ಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರು. ಕಳೆದ ವಾರ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದರು.

‘ಅಪರಿಚಿತ ಸಂಖ್ಯೆಯಿಂದ ನನಗೆ ಕರೆ ಬಂದಿದ್ದು, ಜಯಂತ್ ಸಿಂಗ್ ಅವರನ್ನು ಬಿಡುಗಡೆ ಮಾಡದಿದ್ದರೆ ಅರಿಯಾದಹಗೆ ಹೋದ ವೇಳೆ ಕೊಲೆ ಮಾಡುವುದಾಗಿ ಕರೆ ಮಾಡಿದಾತ ಬೆದರಿಸಿದ್ದ’ ಎಂದು ರಾಯ್ ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

‘ಇದೇ ರೀತಿ ಎರಡು ಬಾರಿ ಬೆದರಿಕೆ ಕರೆ ಬಂದಿತ್ತು. ತಕ್ಷಣ ಬ್ಯಾರಕ್‌ಪುರ ಪೊಲೀಸ್ ಕಮಿಷನರ್‌ ಅವರನ್ನು ಸಂಪರ್ಕಿಸಿ ದೂರವಾಣಿ ಸಂಖ್ಯೆಯನ್ನು ಟ್ರ್ಯಾಕ್‌ ಮಾಡಲು ಮನವಿ ಮಾಡಿದ್ದೇನೆ. ದೂರನ್ನು ಕೂಡ ದಾಖಲಿಸಿದ್ದೇನೆ’ ಎಂದು ಹೇಳಿದರು.

ಬಾಲಕಿಯ ಮೇಲೆ ಗುಂಪು ಹಲ್ಲೆ ನಡೆಸುತ್ತಿರುವ ಹಳೆಯ ವಿಡಿಯೊವೊಂದು ಇತ್ತೀಚೆಗೆ ಹರಿದಾಡಿದ್ದು, ಪ್ರಕರಣ ಸಂಬಂಧ ಜಯಂತ್ ಸಿಂಗ್ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದರು. 2023ರಲ್ಲಿ ಮತ್ತೊಂದು ಪ್ರಕರಣದಲ್ಲಿ ಬಂಧಿತನಾಗಿದ್ದ ಸಿಂಗ್, ಇನ್ನು ಮುಂದೆ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂಬ ಷರತ್ತಿನ ಮೇಲೆ ಜಾಮೀನು ಪಡೆದಿದ್ದರು.

ಅರಿಯಾದಹ, ದಮ್‌ ದಮ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದು, ಈ ಕ್ಷೇತ್ರದಿಂದ ಸೌಗತ ರಾಯ್ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT