ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ ಅಪಘಾತ: ಎರಡೂ ಮಾರ್ಗಗಳಲ್ಲಿ ರೈಲು ಸಂಚಾರ ಪುನರಾರಂಭ

Published 18 ಜೂನ್ 2024, 13:51 IST
Last Updated 18 ಜೂನ್ 2024, 13:51 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ನ್ಯೂ ಜಲಪಾಇಗುಡಿ ನಿಲ್ದಾಣದಿಂದ 10 ಕಿ.ಮೀ ದೂರವಿರುವ ರಂಗಪಾನಿಯಲ್ಲಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಗೂಡ್ಸ್‌ ರೈಲು ಡಿಕ್ಕಿ ಹೊಡೆದಿದ್ದು, ರೈಲಿನ ಹಿಂದಿನ ನಾಲ್ಕು ಬೋಗಿಗಳು ಸಂಪೂರ್ಣ ಹಾನಿಯಾಗೊಳಗಾಗಿದ್ದವು. ಅಪಘಾತದಲ್ಲಿ 10 ಮಂದಿ ಮೃತಪಟ್ಟು, 65ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಘಟನೆ ನಡೆದು ಒಂದು ದಿನದ ಬಳಿಕ ಎರಡೂ ಮಾರ್ಗಗಳಲ್ಲಿ ರೈಲು ಸಂಚಾರ ಪುನರಾರಂಭವಾಗಿದೆ.

ವಿದ್ಯುತ್ ಎಂಜಿನ್‌ಗಳನ್ನು ಹೊಂದಿರುವ ರೈಲುಗಳು ಮಂಗಳವಾರ ಮಧ್ಯಾಹ್ನದಿಂದ ಈ ಮಾರ್ಗದಲ್ಲಿ ಸಂಚರಿಸಲು ಪ್ರಾರಂಭಿಸಿವೆ ಎಂದು ಕತಿಹಾರ್‌ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎಸ್. ಕುಮಾರ್ ತಿಳಿಸಿದ್ದಾರೆ. ಹಳಿಗಳು ಮತ್ತು ಇತರ ಘಟಕಗಳ ದುರಸ್ತಿ ಬಳಿಕ ವೇಗದ ನಿರ್ಬಂಧಗಳೊಂದಿಗೆ ರೈಲುಗಳು ಸಂಚರಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ಸೋಮವಾರ ಬೆಳಿಗ್ಗೆ ಸಂಭವಿಸಿದ್ದ ಅಪಘಾತದಿಂದ ಹಳಿಗಳು ಮತ್ತು ವಿದ್ಯುತ್ ಟ್ರಾಕ್ಷನ್ ಕಂಬಗಳಿಗೆ ವ್ಯಾಪಕ ಹಾನಿಯಾಗಿದೆ. ಸೋಮವಾರ ರಾತ್ರಿ ಎಲೆಕ್ಟ್ರಿಕ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಬಳಸಿ ದುರಸ್ತಿ ಕಾರ್ಯ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸೋಮವಾರ ಸಂಜೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ್ದ ಅವರು, 'ಇದು ಈಶಾನ್ಯವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಮುಖ್ಯ ಮಾರ್ಗವಾಗಿರುವುದರಿಂದ, ಶೀಘ್ರದಲ್ಲೇ ಈ ಮಾರ್ಗದಲ್ಲಿ ರೈಲು ಸೇವೆಗಳನ್ನು ಪುನರಾರಂಭಿಸಲಾಗುವುದು' ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT