ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಜತೆಗಿನ ಸಮಸ್ಯೆ ಬಗೆಹರಿಯದೇ ಭಾರತ ವಿಶ್ವಗುರು ಆಗದು: ಅಯ್ಯರ್‌

Published 22 ಆಗಸ್ಟ್ 2023, 11:34 IST
Last Updated 22 ಆಗಸ್ಟ್ 2023, 11:34 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನದೊಂದಿಗೆ ಮಾತುಕತೆ ನಡೆಯಬೇಕಾದ ಅಗತ್ಯವನ್ನು ಮಾಜಿ ರಾಜತಾಂತ್ರಿಕ ಅಧಿಕಾರಿ, ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ಪ್ರತಿಪಾದಿಸಿದ್ದಾರೆ. ‘ಪಾಕಿಸ್ತಾನದ ಜತೆಗಿನ ಸಮಸ್ಯೆ ಬಗೆಹರಿಸಿಕೊಳ್ಳದ ಹೊರತು, ಭಾರತ ವಿಶ್ವಗುರುವಾಗಲು ಸಾಧ್ಯವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  

1978–82ರ ವರೆಗೆ ಪಾಕಿಸ್ತಾನದಲ್ಲಿ ಭಾರತದ ಕಾನ್ಸಲ್‌ ಜನರಲ್‌ ಆಗಿ ಕಾರ್ಯ ನಿರ್ವಹಿಸಿದ್ದ ಮಣಿಶಂಕರ್‌ ಅಯ್ಯರ್‌ ಅವರ ಆತ್ಮಚರಿತ್ರೆ ‘ಮೆಮೊರಿಸ್‌ ಆಫ್‌ ಎ ಮೇವರಿಕ್‌– ದಿ ಫರ್ಸ್ಟ್‌ ಫಿಫ್ಟಿ ಇಯರ್ಸ್‌ (1941–1991)’  ಸೋಮವಾರ ಮಾರುಕಟ್ಟೆ ಪ್ರವೇಶಿಸಿದೆ. ಪಾಕಿಸ್ತಾನದಲ್ಲಿ ರಾಜತಾಂತ್ರಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದನ್ನು ವಿವರಿಸಲು ಅಯ್ಯರ್‌ ತಮ್ಮ ಕೃತಿಯಲ್ಲಿ ಒಂದು ಅಧ್ಯಾಯವನ್ನೇ ಮೀಸಲಿಟ್ಟಿದ್ದಾರೆ.

ಆತ್ಮಚರಿತ್ರೆ ಕುರಿತು ಸುದ್ದಿ ಸಂಸ್ಥೆ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಣಿಶಂಕರ್‌ ಅಯ್ಯರ್‌, ‘ಪಾಕಿಸ್ತಾನದಲ್ಲಿ ಭಾರತದ ಕಾನ್ಸಲ್‌ ಜನರಲ್‌ ಆಗಿ ಕಾರ್ಯ ನಿರ್ವಹಿಸಿದ್ದು ನನ್ನ ಜೀವನದ ಪ್ರಮುಖ ಅಧ್ಯಾಯ.’ ಎಂದು ಹೇಳಿದ್ದಾರೆ. ಜತೆಗೆ, ‘ನಮ್ಮನ್ನು ಶತ್ರುಗಳಂತೆ ಕಾಣದ ಪಾಕಿಸ್ತಾನದ ನಾಗರಿಕರು ಭಾರತದ ಅತಿದೊಡ್ಡ ಆಸ್ತಿ’ ಎಂದು ಬಣ್ಣಿಸಿದ್ದಾರೆ.  

‘ಪಾಕಿಸ್ತಾನದಲ್ಲಿ ನಿಯೋಜನೆಗೊಂಡು ಮೂರು ವಾರಗಳು ಕಳೆದಿದ್ದವು. ಒಂದು ದಿನ ರಾತ್ರಿ ಭೋಜನ ಕೂಟಕ್ಕೆ ತೆರಳಿದ್ದ ನಾನು ಮತ್ತು ನನ್ನ ಪತ್ನಿ, ಅಲ್ಲಿಂದ ಹೊರಬರುತ್ತಿದ್ದೆವು. ಆಗ ನನ್ನ ಮಡದಿ, ‘ಇದು ನಮ್ಮ ಶತ್ರು ರಾಷ್ಟ್ರವಲ್ಲವೇ’ ಎಂದು ಪ್ರಶ್ನಿಸಿದಳು. ಅಲ್ಲಿದ್ದ ಮೂರು ವರ್ಷ ಮತ್ತು ಆ ವೃತ್ತಿ ತೊರೆದ ಈ 40 ವರ್ಷಗಳಲ್ಲಿ ಈ ಪ್ರಶ್ನೆ ನನ್ನನ್ನು ಕಾಡುತ್ತಲೇ ಇದೆ. ಸೇನೆ ಅಥವಾ ರಾಜಕಾರಣಿಗಳ ನಿಲುವುಗಳೇನೇ ಇರಲಿ... ಪಾಕಿಸ್ತಾನ ನಮ್ಮ ಶತ್ರುವೂ ಅಲ್ಲ, ಭಾರತವನ್ನು ಅವರು ಶತ್ರುರಾಷ್ಟ್ರ ಎಂದು ಪರಿಗಣಿಸುವುದೂ ಇಲ್ಲ ಎಂಬ ತೀರ್ಮಾನಕ್ಕೆ ನಾನಂತು ಬಂದಿದ್ದೇನೆ’ ಎಂದು ಅಯ್ಯರ್‌ ಹೇಳಿದರು. 

‘ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದಕ್ಕೂ ಮೊದಲು ಎಲ್ಲ ಪ್ರಧಾನಿಗಳೂ ಸಮಯ ಸಿಕ್ಕಾಗ ಪಾಕಿಸ್ತಾನದೊಂದಿಗೆ ತಕ್ಕಮಟ್ಟಿಗೆ ಮಾತಕತೆಗಳನ್ನು ನಡೆಸಿದ್ದಾರೆ. ಆದರೆ, ಪರಿಸ್ಥಿತಿ ಈಗ ಬಿಗಡಾಯಿಸಿದೆ. ಇದರ ನೇರ ಸಂತ್ರಸ್ತರು ಪಾಕಿಸ್ತಾನದ ಸೇನೆಯಲ್ಲ. ಬದಲಿಗೆ, ಭಾರತದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಂಧುಗಳನ್ನು ಹೊಂದಿರುವ ಪಾಕಿಸ್ತಾನದ ನಾಗರಿಕರು. ಭಾರತಕ್ಕೆ ಭೇಟಿ ನೀಡಬೇಕು ಎಂದು ಹಂಬಲಿಸುತ್ತಿರುವ ಜನರು. ನಾನು ಕರಾಚಿಯಲ್ಲಿ ರಾಜತಾಂತ್ರಿಕ ಅಧಿಕಾರಿಯಾಗಿದ್ದಾಗ 3 ಲಕ್ಷ ವೀಸಾ ನೀಡಿದ್ದೆ’ ಎಂದೂ ಅವರು ತಿಳಿಸಿದ್ದಾರೆ.  

‘ಪಾಕಿಸ್ತಾನ ನಮಗೆ ಹೊರೆಯಾಗಿರುವ ವರೆಗೆ ವಿಶ್ವದಲ್ಲಿನ ನಮ್ಮ ಸ್ಥಾನವನ್ನು ನಾವು ಪಡೆದುಕೊಳ್ಳಲು ಸಾಧ್ಯವೇ ಆಗುವುದಿಲ್ಲ. ನಮ್ಮ ನೆರೆಹೊರೆಯವರೊಂದಿಗೆ ಹೇಗೆ ವ್ಯವಹರಿಸಬೇಕು ಎಂದೇ ತಿಳಿಯದಿರುವಾಗ,  ಭಾರತವನ್ನು ವಿಶ್ವಗುರು ಎಂದು ಹೇಳುವುದು ಹಾಸ್ಯಾಸ್ಪದ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT