ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದನ ವಿರಾಮ: ವಿಟೊ ಬಳಸಿ ನಿರ್ಣಯ ತಡೆದ ಅಮೆರಿಕ 

Published 20 ಫೆಬ್ರುವರಿ 2024, 16:27 IST
Last Updated 20 ಫೆಬ್ರುವರಿ 2024, 16:27 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ, ಅಮೆರಿಕ: ಗಾಜಾದಲ್ಲಿ ತಕ್ಷಣವೇ ಕದನ ವಿರಾಮ ಘೋಷಣೆ ಮಾಡಬೇಕೆಂಬ ಆಗ್ರಹದ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಂಗಳವಾರ ಮತಕ್ಕೆ ಹಾಕಲಾಗಿದ್ದ ಕರಡು ನಿರ್ಣಯದ ಅನುಮೋದನೆಯನ್ನು ಅಮೆರಿಕ ತನ್ನ ‘ವಿಟೊ’ ಪರಮಾಧಿಕಾರ ಬಳಸಿ ತಡೆಹಿಡಿದಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಅಲ್ಜೀರಿಯಾ ಈ ನಿರ್ಣಯ ಮಂಡಿಸಿತ್ತು. 15 ಸದಸ್ಯರ ಭದ್ರತಾ ಮಂಡಳಿಯಲ್ಲಿ 13 ರಾಷ್ಟ್ರಗಳು ನಿರ್ಣಯವನ್ನು ಬೆಂಬಲಿಸಿದವು. ಇಂಗ್ಲೆಂಡ್ ಮತದಾನದಿಂದ ದೂರ ಉಳಿಯಿತು.

ಇಸ್ರೇಲ್‌–ಹಮಾಸ್‌ ಯುದ್ಧ ಆರಂಭವಾದ ಬಳಿಕ (ಅಕ್ಟೋಬರ್‌ 7) ಅಮೆರಿಕವು ವಿಟೊ ಬಳಸಿ ಕದನ ವಿರಾಮ ನಿರ್ಣಯವನ್ನು ತಡೆದಿರುವುದು ಇದು ಮೂರನೇ ಬಾರಿ. ಈ ಹಿಂದೆ ಯುಎಇ ಮಂಡಿಸಿದ್ದ ನಿರ್ಣಯವನ್ನು ತಡೆದಿತ್ತು.

‘ಮಾನವೀಯ ನೆಲೆಯಲ್ಲಿ ತಕ್ಷಣವೇ ಕದನ ವಿರಾಮ ಘೋಷಿಸಬೇಕು. ಎಲ್ಲ ದೇಶಗಳೂ ಇದನ್ನು ಒಪ್ಪಬೇಕು’ ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿತ್ತು. 

‘ಈ ಕರಡು ನಿರ್ಣಯ ಮತದಾನದ ಹಂತಕ್ಕೆ ಬಂದರೆ, ಅದು ಮುಂದುವರೆಯಲು ನಾವು ಬಿಡುವುದಿಲ್ಲ’ ಎಂದು ವಿಶ್ವಸಂಸ್ಥೆಗೆ ಅಮೆರಿಕದ ಉಪ ರಾಯಭಾರಿ ಆಗಿರುವ ರಾಬರ್ಟ್ ವುಡ್ ಈ ಹಿಂದೆಯೇ ತಿಳಿಸಿದ್ದರು. 

ರಾಜಕುಮಾರ ವಿಲಿಯಂ ಕಳವಳ (ಲಂಡನ್‌ ವರದಿ): ಇಸ್ರೇಲ್– ಹಮಾಸ್‌ ಯುದ್ಧದಿಂದ ಅಪಾರ ಪ್ರಾಣ ಹಾನಿ ಸಂಭವಿಸಿರುವುದಕ್ಕೆ ರಾಜಕುಮಾರ ವಿಲಿಯಂ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

‘ಇತರ ಅನೇಕ ಮಂದಿಯಂತೆ ನಾನು ಕೂಡಾ ಈ ಯುದ್ಧ ಬೇಗನೇ ಕೊನೆಗೊಳ್ಳಬೇಕೆಂದು ಬಯಸುತ್ತೇನೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಯುದ್ಧಪೀಡಿತ ಗಾಜಾ ಪಟ್ಟಿಗೆ ಮಾನವೀಯ ನೆರವಿನ ಅಗತ್ಯವಿದೆ. ಅಲ್ಲಿನ ಜನರಿಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಪೂರೈಸುವುದು ಮತ್ತು ಎಲ್ಲ ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆ ಮುಖ್ಯವಾಗಿದೆ’ ಎಂದಿದ್ದಾರೆ.

ಬ್ರಿಟನ್‌ನ ರಾಜ ಕುಟುಂಬವು ಸಾಮಾನ್ಯವಾಗಿ ಯುದ್ಧ ಅಥವಾ ಅಂತರರಾಷ್ಟ್ರೀಯ ಮಟ್ಟದ ವಿವಾದಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT