ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಯಾ ವಿರುದ್ಧ ಉಪರಾಷ್ಟ್ರಪತಿ ಧನಕರ್‌ ಪರೋಕ್ಷ ವಾಗ್ದಾಳಿ

ದೇಶದಲ್ಲಿ ‘ಬಲವಂತದಿಂದ ಜನರ ಬಾಯಿ ಮುಚ್ಚಿಸಲಾಗುತ್ತಿದೆ’ ಎಂಬ ಟೀಕೆಗೆ ಖಂಡನೆ
Published 26 ಏಪ್ರಿಲ್ 2023, 11:21 IST
Last Updated 26 ಏಪ್ರಿಲ್ 2023, 11:21 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತದಲ್ಲಿನ ಪ್ರಜೆಗಳಿಗೆ ಇರುವಷ್ಟು ಅಭಿವ್ಯಕ್ತಿ ಸ್ವಾತಂತ್ರ್ಯ ಜಗತ್ತಿನ ಬೇರೆ ಯಾವ ದೇಶದಲ್ಲಿಯೂ ಇಲ್ಲ’ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಬುಧವಾರ ಹೇಳಿದ್ದಾರೆ.

ಇತ್ತೀಚೆಗೆ ಇಂಗ್ಲಿಷ್‌ ದೈನಿಕದಲ್ಲಿ ಪ್ರಕಟವಾದ ಲೇಖನದಲ್ಲಿ, ‘ದೇಶದಲ್ಲಿ ಬಲವಂತದಿಂದ ಜನರ ಬಾಯಿ ಮುಚ್ಚಿಸಲಾಗುತ್ತಿದೆ’ ಎಂದು ಬರೆದಿದ್ದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ‘ವಿದೇಶಗಳಲ್ಲಿ ಸುತ್ತಾಡುವ ಕೆಲವರು ತಮ್ಮ ದೇಶದಲ್ಲಿ ಆಗುತ್ತಿರುವ ಅಭಿವೃದ್ಧಿಯನ್ನು ನಿರ್ಲಕ್ಷಿಸುತ್ತಾರೆ’ ಎಂದು ಟೀಕಿಸಿದ್ದಾರೆ.

‘ಮನ್‌ ಕಿ ಬಾತ್‌’ ಮಾಸಿಕ ಬಾನುಲಿ ಸರಣಿಗೆ ನೂರು ತುಂಬಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಬೌದ್ಧಿಕ ವಲಯಕ್ಕೆ ಏನಾಗಿದೆ ಎಂದು ಕೆಲವೊಮ್ಮೆ ಯೋಚಿಸಿದಾಗ ನನಗೆ ನೋವಾಗುತ್ತದೆ. ಬಲವಂತವಾಗಿ ಬಾಯಿ ಮುಚ್ಚಿಸಲಾಗುತ್ತಿದೆ ಎಂಬುದರ ಬಗ್ಗೆ ದೀರ್ಘ ಲೇಖನಗಳನ್ನು ಬರೆಯುತ್ತಾರೆ. ಆದರೆ, ದೇಶದಲ್ಲಿ ಒತ್ತಾಯದಿಂದ ಜನರ ಬಾಯಿ ಮುಚ್ಚಿಸಲು ಆಗುತ್ತದೆಯೇ? ಇಷ್ಟೊಂದು ವ್ಯಾಪಕ ಪ್ರಮಾಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ವಿಶ್ವದ ಬೇರೆ ಯಾವ ದೇಶದಲ್ಲಿಯೂ ಕಂಡುಬರುವುದಿಲ್ಲ. ಎಂದರು.

‘ಮನ್‌ ಕಿ ಬಾತ್‌’ ಕುರಿತು ಪ್ರಸ್ತಾಪಿಸಿದ ಅವರು, ‘ಆಕಾಶವಾಣಿಯಲ್ಲಿ ಬಿತ್ತರವಾಗುತ್ತಿರುವ ಈ ಮಾಸಿಕ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯದಿಂದ ದೂರವಿಟ್ಟಿದ್ದಾರೆ’ ಎಂದು ಶ್ಲಾಘಿಸಿದರು.

‘ಭರವಸೆಯೇ ಕಡಿಮೆಯಾಗಿ, ಜಾಗತಿಕ ಮಟ್ಟದಲ್ಲಿ ದೇಶದ ವರ್ಚಸ್ಸು ಪಾತಾಳಕ್ಕೆ ಇಳಿದಿದ್ದ ಸಂದರ್ಭದಲ್ಲಿ ಈ ಕಾರ್ಯಕ್ರಮ ಆಶಾಕಿರಣವಾಗಿ ಹೊರಹೊಮ್ಮಿದೆ. ನಕಾರಾತ್ಮಕ ಚಿಂತನೆಗಳಿಗೆ ಪರಿಹಾರವೆನಿಸಿದೆ’ ಎಂದೂ ಬಣ್ಣಿಸಿದರು.

ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌, ಸಚಿವಾಲಯದ ಕಾರ್ಯದರ್ಶಿ ಅಪೂರ್ವಚಂದ್ರ, ಪ್ರಸಾರ ಭಾರತಿ ಸಿಇಒ ಗೌರವ್‌ ದ್ವಿವೇದಿ ಇದ್ದರು.

‘ಮನ್‌ ಕಿ ಬಾತ್‌ @100’ ಕುರಿತ ಸ್ಮರಣ ಸಂಚಿಕೆ ಹಾಗೂ ಪ್ರಸಾರ ಭಾರತಿ ಮಾಜಿ ಸಿಇಒ ಎಸ್‌.ಎಸ್‌.ವೆಂಪತಿ ಅವರ ‘ಕಲೆಕ್ಟಿವ್ ಸ್ಪಿರಿಟ್,ಕಾಂಕ್ರೀಟ್ ಆ್ಯಕ್ಷನ್‌’ ಎಂಬ ಕೃತಿಯನ್ನು ಧನಕರ್‌ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT