ವಯನಾಡ್, ಕೇರಳ: ಧಾರಾಕಾರ ಮಳೆ ಸುರಿದಿದ್ದರಿಂದ ಸಂಭವಿಸಿದ ಹಲವು ಭೂಕುಸಿತಗಳು ಮತ್ತು ಪ್ರವಾಹದಿಂದ ತತ್ತರಿಸಿರುವ ವಯನಾಡ್‌ನ ಗ್ರಾಮಗಳಿಂದ 138 ಮಂದಿ ನಾಪತ್ತೆಯಾಗಿದ್ದಾರೆ. ಜಿಲ್ಲಾಡಳಿತವು ಈ ಸಂಬಂಧ ಅಧಿಕೃತವಾಗಿ ಕರಡುಪಟ್ಟಿ ಪ್ರಕಟಿಸಿದೆ.
ಚೂರಲ್‌ಮಲ ಮತ್ತು ಮುಂಡಕ್ಕೈ ಸೇರಿದಂತೆ ಭೂಕುಸಿತದಿಂದ ತೀವ್ರ ಬಾಧಿತವಾಗಿರುವ ಗ್ರಾಮಗಳಲ್ಲಿ ಮೃತಪಟ್ಟವರ ಸಂಖ್ಯೆ 226ಕ್ಕೆ ಏರಿದೆ.
ಬಾಧಿತ ಪ್ರದೇಶಗಳ ಕುಟುಂಬಗಳ ಪಡಿತರ ಚೀಟಿ, ಮತದಾರರ ಚೀಟಿಯ ವಿವರಗಳು, ಗ್ರಾಮ ಪಂಚಾಯಿತಿ, ಐಸಿಡಿಎಸ್, ಜಿಲ್ಲಾ ಪ್ರಾಕೃತಿಕ ವಿಕೋಪ ಪ್ರಾಧಿಕಾರ, ಜಿಲ್ಲಾ ಶಿಕ್ಷಣ ಇಲಾಖೆಯ ದಾಖಲೆಗಳನ್ನು ಆಧರಿಸಿ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಶಿಬಿರಗಳಲ್ಲಿ ಆಶ್ರಯ ಪಡೆದಿರುವವರು, ಸಂಬಂಧಿಕರ ಮನೆಗಳಲ್ಲಿ ಉಳಿದಿರುವವರು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವವರು ಹಾಗೂ ಸಾವು ದೃಢಪಟ್ಟಿರುವವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದು ಮೊದಲ ಕರಡು ಪಟ್ಟಿಯಾಗಿದೆ. ಸಾರ್ವಜನಿಕರು ಈ ಪಟ್ಟಿಯನ್ನು ಗಮನಿಸಿ, ಉಲ್ಲೇಖವಾಗದ ಹಾಗೂ ನಾಪತ್ತೆ ಆಗಿರುವವರ ಮಾಹಿತಿ ಇದ್ದಲ್ಲಿ ನೀಡಬೇಕು ಎಂದು ಜಿಲ್ಲಾಡಳಿತವು ಕೋರಿದೆ.
ವಯನಾಡ್ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್ ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿರುವ ಖಾತೆಗಳು, ಜಿಲ್ಲಾಧಿಕಾರಿಗಳ ಕಚೇರಿಯ ಸೂಚನಾ ಫಲಕಗಳಲ್ಲೂ ಈ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ಮಧ್ಯೆ, ಚೂರಲ್‌ಮಲ ಮತ್ತು ಮುಂಡಕ್ಕೈ ಗ್ರಾಮಗಳ ವ್ಯಾಪ್ತಿಯಲ್ಲಿ 9ನೇ ದಿನವಾದ ಬುಧವಾರವೂ ಶೋಧಕಾರ್ಯ ಮುಂದುವರಿದಿದೆ. ವಿವಿಧ ಪಡೆಗಳ ಒಟ್ಟು 1,026 ಮಂದಿ ನಿರತರಾಗಿದ್ದಾರೆ.
ಪರಿಹಾರ ನಿರ್ವಹಣೆ, ವಿತರಣೆಗೆ ತಂತ್ರಜ್ಞಾನ ನೆರವು:
ಇನ್ನೊಂದೆಡೆ, ಪರಿಹಾರ ಕಾರ್ಯಗಳಿಗೆ ನೆರವಾಗಲು ಕೊಚ್ಚಿ ಮೂಲದ ಸಾಫ್ಟ್‌ವೇರ್ ಅಭಿವೃದ್ಧಿ ಸಂಸ್ಥೆ ಫೇರ್‌ಕೋರ್ ಇನ್ಫೊಟೆಕ್ ತಾಂತ್ರಿಕ ಪರಿಣತಿ ಹಾಗೂ ತಂತ್ರಜ್ಞಾನದ ನೆರವನ್ನು ಜಿಲ್ಲಾಡಳಿತಕ್ಕೆ ಒದಗಿಸಿದೆ.
ಇಲ್ಲಿನ ಸೇಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಸ್ಥಾಪಿಸಿರುವ ಪರಿಹಾರ ನೆರವು ಸಂಗ್ರಹ ಕೇಂದ್ರದಲ್ಲಿ ಅತ್ಯಾಧುನಿಕ ನಿರ್ವಹಣಾ ವ್ಯವಸ್ಥೆಯನ್ನು ಸಂಸ್ಥೆಯ ಸ್ಥಾಪಕ ರಜಿತ್ ರಾಮಚಂದ್ರನ್ ಮತ್ತು ತಂಡವು ಅಳವಡಿಸಿದೆ.
ಅಗಾಧವಾಗಿ ಬರುತ್ತಿರುವ ಪರಿಹಾರ ಸಾಮಗ್ರಿಗಳ ನಿರ್ವಹಣೆಗೆ ಕಂದಾಯ ಇಲಾಖೆ ಅಧಿಕಾರಿಗಳ ಕೆಲಸವನ್ನು ಇದು ಹಗುರಾಗಿಸಿದೆ. ಅಲ್ಲದೆ, ಸಕಾಲದಲ್ಲಿ ಮತ್ತು ಪರಿಣಾಮಕಾರಿಯಾಗಿ ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ಸಾಧ್ಯವಾಗಿದೆ.
‘ವಯನಾಡ್ ಜಿಲ್ಲಾಧಿಕಾರಿ ಅವರನ್ನು ಈ ಕುರಿತು ಜುಲೈ 31ರಂದು ಸಂಪರ್ಕಿಸಿದೆವು. ಅವರು ಸಮ್ಮತಿಸಿದರು. ಸಂಸ್ಥೆಯ ಇಆರ್‌ಪಿ ಸಾಫ್ಟ್‌ವೇರ್ ನಿರ್ವಹಣೆಯ ಒಟ್ಟು ವ್ಯವಸ್ಥೆಯನ್ನು ಸರಾಗಗೊಳಿಸಿದೆ’ ಎಂದು ರಜಿತ್ ತಿಳಿಸಿದರು.
‘ಸಾಫ್ಟ್‌ವೇರ್ ಬಳಕೆಗೆ 10 ಅಧಿಕಾರಿಗಳಿಗೆ ತರಬೇತಿ ನೀಡಿದೆ. ನಾವು ಇಆರ್‌ಪಿ (ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್) ಅಳವಡಿಸಿದ್ದೇವೆ. ಅಧಿಕಾರಿಗಳು ತ್ವರಿತಗತಿಯಲ್ಲಿ ಇದನ್ನು ಅರ್ಥಮಾಡಿಕೊಂಡರು ಮತ್ತು ಅಳವಡಿಸಿಕೊಂಡರು’ ಎಂದು ಹೇಳಿದರು.
ಪಾಲಕ್ಕಾಡ್ ಮೂಲದ, 39 ವರ್ಷದ ರಜಿತ್ ಅವರು ಕೊಚ್ಚಿಯಲ್ಲಿ ಕಂಪನಿ ನಡೆಸುತ್ತಿದ್ದಾರೆ. ಸಂಕಷ್ಟ ಸಂದರ್ಭದಲ್ಲಿ ಜನತೆ, ಜಿಲ್ಲಾಡಳಿತಕ್ಕೆ ನೆರವಾಗುತ್ತಾರೆ. ಈ ಹಿಂದೆ ಕೋವಿಡ್–19 ಮತ್ತು 2018ರ ಪ್ರವಾಹ ಸಂದರ್ಭದಲ್ಲಿ ಅವರು ಜಿಲ್ಲಾಡಳಿತಕ್ಕೆ ನೆರವಾಗಿದ್ದರು.
ವಯನಾಡ್ ಭೂಕುಸಿತ ಅತಿದೊಡ್ಡ ದುರಂತ. ಈ ಅವಘಡವನ್ನು ಸರ್ಕಾರ ರಾಷ್ಟ್ರೀಯ ವಿಕೋಪ ಎಂದು ಘೋಷಿಸಬೇಕು. ಬಾಧಿತ ನಿವಾಸಿಗಳಿಗೆ ಹೆಚ್ಚಿನ ಪರಿಹಾರವನ್ನು ಘೋಷಿಸಬೇಕು.-ರಾಹುಲ್‌ಗಾಂಧಿ ಲೋಕಸಭೆ ವಿರೋಧಪಕ್ಷದ ನಾಯಕ
ಭೂಕುಸಿತ ಬಾಧಿತ ಗ್ರಾಮಗಳ ಸಂತ್ರಸ್ತರಿಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಾಗರಿಕರು ಹೆಚ್ಚಿನ ದೇಣಿಗೆ ನೀಡಲು ಮುಂದಾಗಬೇಕು-ಎ.ಕೆ.ಆಂಟನಿ ಕಾಂಗ್ರೆಸ್ ಹಿರಿಯ ಮುಖಂಡ
ಮಾನಸಿಕ ಆಘಾತ: ಜೆಸಿಬಿ ನಿರ್ವಾಹಕರುಸೇರಿ ನೆರವು ಸಿಬ್ಬಂದಿಗೆ ಚಿಕಿತ್ಸಾ ನೆರವು ವಯನಾಡ್ (ಪಿಟಿಐ): ಶವಗಳ ಶೋಧ ರಕ್ಷಣಾ ಕಾರ್ಯಲ್ಲಿ ತೊಡಗಿದ್ದ ಜೆಸಿಬಿ ನಿರ್ವಾಹಕರೂ ಸೇರಿ ಭೂಕುಸಿತದ ಸ್ಥಳದ ಚಿತ್ರಣವನ್ನು ಗಮನಿಸಿ ಪರಿಹಾರ ಕಾರ್ಯಗಳಲ್ಲಿ ನಿರತ ಹಲವರು ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಸಿಬಿ ನಿರ್ವಾಹಕರು ಸೇರಿದಂತೆ ನೆರವು ಸಿಬ್ಬಂದಿಗೆ ಮಾನಸಿಕ ಆರೋಗ್ಯ ಚಿಕಿತ್ಸೆ ನೆರವು ಸಮಾಲೋಚನೆಗೆ ಸರ್ಕಾರ ಮುಂದಾಗಿದೆ. ಶೋಧ ಕಾರ್ಯಕ್ಕೆ 300ಕ್ಕೂ ಹೆಚ್ಚು ಜೆಸಿಬಿಗಳ ನೆರವು ಪಡೆಯಲಾಗಿತ್ತು. ಬಿಹಾರ ತಮಿಳುನಾಡು ಪಶ್ಚಿಮ ಬಂಗಾಳ ಆಂಧ್ರಪ್ರದೇಶ ಜಾರ್ಖಂಡ್ ಒಡಿಶಾ ಕರ್ನಾಟಕದಿಂದಲೂ ನಿರ್ವಾಹಕರು ತೆರಳಿದ್ದರು. ಇವರಿಗೆ ಭಿನ್ನ ಭಾಷೆಗಳಲ್ಲಿ ಮಾನಸಿಕ ಆರೋಗ್ಯ ಸಲಹೆ ನೀಡಲಾಗುತ್ತಿದೆ. ಇದರ ಹೊರತಾಗಿ ಭೂಕುಸಿತ ಪ್ರದೇಶಗಳ ಬಾಧಿತರಿಗೆ ನೆರವಾಗಲು ಸಂಚಾರ ಮಾನಸಿಕ ಆರೋಗ್ಯ ಘಟಕವನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದರು. ಸೂಪರ್ ಸ್ಪೆಷಾಲಿಟಿ ಟೆಲಿ ಸಂವಹನ ಸೇವೆಯನ್ನು ಶಿಬಿರಗಳು ಹಾಗೂ ಬಾಧಿತ ವಲಯದಲ್ಲಿ ಉಳಿದ ಮನೆಗಳಲ್ಲಿ ಇರುವ ಜನರಿಗೆ ಒದಗಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರಾದ ಆರ್. ಬಿಂದು ತಿಳಿಸಿದರು.
ಪರಿಹಾರ: ಸೇನಾ ಸಿಬ್ಬಂದಿಗೆ ಶ್ಲಾಘನೆ: ವಿದ್ಯಾರ್ಥಿ ಪತ್ರ ಸೇನೆ ಉತ್ತರ ವೈರಲ್ ಕೋಯಿಕ್ಕೋಡ್ (ಪಿಟಿಐ): ಭೂಕುಸಿತದ ಗ್ರಾಮಗಳಲ್ಲಿ ತ್ವರಿತ ಪರಿಹಾರದಿಂದ ಗಮನಸೆಳೆದಿದ್ದ ಸೇನೆಯ ಸೇವೆಯನ್ನು ಶ್ಲಾಘಿಸಿ ಕೇರಳದ ಶಾಲಾ ಬಾಲಕನೊಬ್ಬ ಬರೆದ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿದೆ. ಸೇನೆಯೂ ಇದಕ್ಕೆ ಭಾವನಾತ್ಮಕವಾಗಿಯೇ ಪ್ರತಿಕ್ರಿಯಿಸಿದೆ. ಕೋಯಿಕ್ಕೋಡ್‌ನ ಎಎಂಎಲ್‌ಪಿ ಶಾಲೆ 3ನೇ ತರಗತಿಯ ವಿದ್ಯಾರ್ಥಿ ರಾಯನ್ ಬರೆದಿದ್ದ ಪತ್ರವನ್ನು ಸೇನೆ ‘ಎಕ್ಸ್’ ಜಾಲತಾಣದ ತನ್ನ ಖಾತೆಯಲ್ಲಿ ಹಂಚಿಕೊಂಡಿದೆ. ತನ್ನ ಶಾಲಾ ಡೈರಿಯಲ್ಲಿ ಮಲಯಾಳ ಭಾಷೆಯಲ್ಲಿ ಬಾಲಕ ಪತ್ರ ಬರೆದಿದ್ದಾನೆ. ‘ನನ್ನ ಹೆಮ್ಮೆಯ ವಯನಾಡ್‌ನಲ್ಲಿ ಭಾರಿ ಭೂಕುಸಿತ ಆಗಿತ್ತು. ಅವಶೇಷಗಳಡಿ ಸಿಕ್ಕಿದ್ದವರ ರಕ್ಷಿಸುವ ಯೋಧರ ಸೇವೆ ಕಂಡು ಹೆಮ್ಮೆ ಸಂತಸವಾಗಿದೆ’ ಎಂದು ಬರೆದಿದ್ದಾನೆ. ಹಸಿವು ನೀಗಿಸಿಕೊಳ್ಳಲು ಯೋಧರು ಬಿಸ್ಕೆಟ್ ತಿನ್ನುತ್ತಿರುವ ವಿಡಿಯೋ ಕುರಿತು ಉಲ್ಲೇಖಿಸಿದ್ದಾನೆ. ನನಗೂ ಸೇನೆಗೆ ಸೇರುವ ಆಸೆ ಇದೆ ಎಂದು ಹೇಳಿಕೊಂಡಿದ್ದಾನೆ. ಸೇನೆಯು ಇದಕ್ಕೆ ‘ಪ್ರತಿಕೂಲ ಸಂದರ್ಭಗಳಲ್ಲಿ ಭರವಸೆಗಳೇ ಶಕ್ತಿ ನೀಡುತ್ತವೆ. ನಿನ್ನಂತಹ ಹೀರೋಗಳು ಸೇನೆಗೆ ಪ್ರೇರೇಪಣೆ ಆಗುತ್ತಾರೆ. ಸೇನೆಯ ಸಮವಸ್ತ್ರದಲ್ಲಿ ನಿನ್ನನ್ನು ನೋಡಲು ಕಾತುರರಾಗಿದ್ದೇವೆ’ ಎಂದು ಉತ್ತರಿಸಿದೆ. ಬಾಲಕನನ್ನು ಯೋಧ ಎಂದೇ ಸಂಬೋಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.