ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾತಿ ಗಣತಿ ಅವಶ್ಯವಿಲ್ಲ: ಆರ್‌ಎಸ್‌ಎಸ್‌

Published 19 ಡಿಸೆಂಬರ್ 2023, 16:12 IST
Last Updated 19 ಡಿಸೆಂಬರ್ 2023, 16:12 IST
ಅಕ್ಷರ ಗಾತ್ರ

ನಾಗ್ಪುರ: ‘ಜಾತಿ ಗಣತಿಯಿಂದ ಏನನ್ನೂ ಸಾಧಿಸಲಾಗದು. ಅದರ ಅವಶ್ಯಕತೆಯೂ ಇಲ್ಲ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿದರ್ಭ ಸಹ ಸಂಘಚಾಲಕ ಶ್ರೀಧರ ಗಾಡ್ಗೆ ಮಂಗಳವಾರ ಹೇಳಿದ್ದಾರೆ.

‘ಜಾತಿ ಆಧಾರಿತ ಜನಗಣತಿಯಿಂದ ಒಂದು ನಿರ್ದಿಷ್ಟ ಜಾತಿಯ ಜನಸಂಖ್ಯೆಯ ದತ್ತಾಂಶ ಒದಗಿಸಬಹುದು. ಇಂತಹ ಕಸರತ್ತು, ರಾಜಕೀಯವಾಗಿ ಕೆಲವು ವ್ಯಕ್ತಿಗಳಿಗೆ ಮಾತ್ರ ಲಾಭವಾಗಬಹುದು. ಆದರೆ, ಇದು ಸಾಮಾಜಿಕವಾಗಿ ಮತ್ತು ರಾಷ್ಟ್ರೀಯ ಏಕತೆಯ ದೃಷ್ಟಿಯಿಂದ ಒಳಿತಲ್ಲ’ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.  

‘ನಮಗೆ ಜಾತಿ ಗಣತಿಯ ಅವಶ್ಯಕತೆ ಇಲ್ಲವೆನಿಸುತ್ತದೆ. ಇದಕ್ಕೆ ಬೇರೆ ಕಾರಣವೇನಿಲ್ಲ, ಜಾತಿ ಆಧಾರಿತ ಸಮೀಕ್ಷೆಯಿಂದ ನಾವು ಏನು ಸಾಧಿಸಬಹುದು? ಇದು ತಪ್ಪು. ಅಸಮಾನತೆ, ದ್ವೇಷ, ಜಗಳ ಇರಬಾರದು ಎಂಬುದು ನಮ್ಮ ಸ್ಪಷ್ಟ ನಿಲುವು’ ಎಂದರು.

‘ಮೀಸಲಾತಿಗೂ ಜಾತಿ ಗಣತಿಗೂ ಯಾವುದೇ ಸಂಬಂಧವಿಲ್ಲ. ಜಾತಿ ವ್ಯವಸ್ಥೆಯನ್ನು ನೀವು ನಿರ್ಮೂಲನೆ ಮಾಡಬಹುದು. ಮೀಸಲಾತಿ ಮತ್ತು ಜಾತಿ ವ್ಯವಸ್ಥೆ ಬೇರೆ ಬೇರೆ ವಿಷಯಗಳಾಗಿದ್ದು, ಸಾಮಾಜಿಕ ಉನ್ನತಿಗಾಗಿ ಮೀಸಲಾತಿ ಜಾರಿಗೆ ತರಲಾಗಿದೆ. ಸಂಪೂರ್ಣ ಸಾಮಾಜಿಕ ಪ್ರಗತಿ ಆಗುವವರೆಗೆ ಮೀಸಲಾತಿ ಮುಂದುವರಿಯಲಿದೆ. ಏಕೆಂದರೆ, ಎಲ್ಲ ಸಮುದಾಯಗಳು ಇನ್ನೂ ಪ್ರಗತಿ ಸಾಧಿಸಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಆರ್‌ಎಸ್‌ಎಸ್‌ಗೆ ಸ್ಪಷ್ಟ ನಿಲುವು ಇದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಪ್ರಗತಿ ಹೊಂದುವವರೆಗೂ ಮೀಸಲಾತಿ ಮುಂದುವರಿಯಲಿದೆ ಎಂಬ ನಿರ್ಣಯವನ್ನು ಪ್ರತಿನಿಧಿ ಸಭೆಯಲ್ಲಿ ಅಂಗೀಕರಿಸಲಾಗಿದೆ. ಇದು ಸಾಮಾಜಿಕ ವ್ಯವಸ್ಥೆಯಾಗಿದೆ. ಆದರೆ ಜಾತಿ ಆಧಾರಿತ ಜನಗಣತಿಗೂ ಮೀಸಲಾತಿಗೂ ಯಾವುದೇ ಸಂಬಂಧವಿಲ್ಲ. ಏಕೆಂದರೆ ಜಾತಿಯನ್ನು ಲೆಕ್ಕಿಸದಿದ್ದರೆ ಮೀಸಲಾತಿಗೆ ಯಾವುದೇ ಅಡ್ಡಿಯಾಗುವುದಿಲ್ಲ’ ಎಂದು ಗಾಡ್ಗೆ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT