ಮಥುರ: ಅಂಗನವಾಡಿ ಕಾರ್ಯಕರ್ತೆ ಉದ್ಯೋಗದ ಆಕಾಂಕ್ಷಿ ಮಹಿಳೆ ಅರ್ಜಿ ಭರ್ತಿ ಮಾಡಲು ಸಾರ್ವಜನಿಕ ಸೇವಾ ಕೇಂದ್ರಕ್ಕೆ ಹೋಗಿದ್ದಾಗ ನಾಲ್ವರಿಂದ ಸಾಮೂಹಿಕ ಅತ್ಯಾಚಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದೆ.
ಕೃತ್ಯವನ್ನು ವಿಡಿಯೊ ಚಿತ್ರೀಕರಣ ಮಾಡಲಾಗಿದ್ದು, ಆಕೆಯ ಸಂಬಂಧಿಕರಿಗೆ ಅದನ್ನು ಕಳುಹಿಸಿದ್ದಾರೆ ಎಂದು ಸಂತ್ರಸ್ತೆ ದೂರಿರುವುದಾಗಿ ಪೊಲೀಸರು ಹೇಳಿದ್ದಾರೆ.
ಮೇ 28ರಂದು ಸಂತ್ರಸ್ತೆ ಸಾರ್ವಜನಿಕ ಸೇವಾ ಕೇಂದ್ರಕ್ಕೆ ಅಂಗನವಾಡಿ ಕಾರ್ಯಕರ್ತೆ ಹುದ್ದೆಯ ಅರ್ಜಿ ಭರ್ತಿ ಮಾಡಲು ತೆರಳಿದ್ದರು. ಅಲ್ಲಿದ್ದ ಕೇಂದ್ರ ನಿರ್ವಾಹಕ, ಕಂಪ್ಯೂಟರ್ ನಿರ್ವಾಹಕ, ಅಂಗಡಿ ಮಾಲಿಕ ಸೇರಿದಂತೆ ಮತ್ತೊಬ್ಬ ವ್ಯಕ್ತಿ ಆಕೆಯ ಮೇಲೆ ಲೈಂಗಿಕ ಶೋಷಣೆ ನಡೆಸಿದ್ದಾರೆ.
ಆರೋಪಿಯೊಬ್ಬ ಮಹಿಳೆಯ ಸಂಬಂಧಿಕರಿಗೆ ಅತ್ಯಾಚಾರದ ವಿಡಿಯೊವನ್ನು ಕಳುಹಿಸಿದ್ದರಿಂದ ವಿಚಾರ ಹೊರಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿ ಶ್ರೀಶ್ ಚಂದ್ರ ತಿಳಿಸಿದ್ದಾರೆ.
ಆರೋಪಿಗಳು ಮತ್ತು ಸಂತ್ರಸ್ತೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಒಂದೇ ಊರಿನವರಾಗಿದ್ದಾರೆ. ಜೊತೆಯಾಗಿ ಶಿಕ್ಷಣ ಪಡೆದವರಾಗಿದ್ದಾರೆ ಎಂದು ಶ್ರೀಶ್ ಚಂದ್ರ ಮಾಹಿತಿ ನೀಡಿದ್ದಾರೆ.