ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸೇರಲು ಶರ್ಮಿಳಾ ಉತ್ಸುಕ; ಪಕ್ಷದ ನಾಯಕತ್ವದಿಂದ ನಿರಾಸಕ್ತಿ: ವರದಿ

Published 29 ಜೂನ್ 2023, 14:15 IST
Last Updated 29 ಜೂನ್ 2023, 14:15 IST
ಅಕ್ಷರ ಗಾತ್ರ

ನವದೆಹಲಿ: ವೈಎಸ್‌ಆರ್‌ ತೆಲಂಗಾಣ ಪಕ್ಷದ ಸಂಸ್ಥಾಪಕಿ ವೈ.ಎಸ್‌. ಶರ್ಮಿಳಾ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್‌ ಜೊತೆ ವಿಲೀನಗೊಳಿಸಲು ಮತ್ತು ತೆಲಂಗಾಣದಲ್ಲಿ ರಾಜಕೀಯವಾಗಿ ನೆಲೆ ಕಂಡುಕೊಳ್ಳಲು ಉತ್ಸುಕರಾಗಿದ್ದಾರೆ. ಆದರೆ, ರಾಜ್ಯದ ಕಾಂಗ್ರೆಸ್‌ ಘಟಕವು ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಹಿಂದೇಟು ಹಾಕುತ್ತಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ. 

ರಾಜ್ಯದಲ್ಲಿ ಶರ್ಮಿಳಾ ಹೊಂದಿರುವ ರಾಜಕೀಯ ಪ್ರಭಾವದ ಕುರಿತು ಕಾಂಗ್ರೆಸ್‌ನ ಕೇಂದ್ರ ನಾಯಕತ್ವಕ್ಕೆ ಅನುಮಾನವಿರುವ ಕಾರಣ ವೈಎಸ್‌ಆರ್‌ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್‌ ಜೊತೆ ವಿಲೀನ ಮಾಡಿಕೊಳ್ಳುವ ನಿಟ್ಟಿನಲ್ಲಿ ಇನ್ನೂ ನಿರ್ಧರಿಸಿಲ್ಲ ಎನ್ನಲಾಗಿದೆ.

ಶರ್ಮಿಳಾ ಅವರ ಆಗಮನದಿಂದ ತೆಲಂಗಾಣ ಕಾಂಗ್ರೆಸ್‌ ಮೇಲಾಗುವ ಪ್ರಭಾವ ಕುರಿತು ಮಾಹಿತಿ ಒದಗಿಸುವಂತೆ ಪಕ್ಷದ ಚುನಾವಣಾ ತಂತ್ರಜ್ಞ ಸುನೀಲ್‌ ಕನಗೋಲು ಅವರಿಗೆ ಸೂಚಿಸಲಾಗಿದೆ. ಜೊತೆಗೆ, ಶರ್ಮಿಳಾ ಅವರ ತವರು ರಾಜ್ಯವಾದ ಆಂಧ್ರಪ್ರದೇಶದಲ್ಲಿ ಅವರು ಹೊಂದಿರುವ ಪ್ರಭಾವದ ಕುರಿತೂ ಮಾಹಿತಿ ನೀಡಲು ಹೇಳಲಾಗಿದೆ ಎಂದು ಮೂಲಗಳು ಹೇಳಿವೆ.

ತೆಲಂಗಾಣ ಕಾಂಗ್ರೆಸ್‌ ಅಧ್ಯಕ್ಷ ರೇವಂತ್‌ ರೆಡ್ಡಿ ಸೇರಿ ಪಕ್ಷದ ಹಲವು ನಾಯಕರು ಶರ್ಮಿಳಾ ಅವರ ಸೇರ್ಪಡೆಯನ್ನು ವಿರೋಧಿಸಿದ್ದಾರೆ. ಶರ್ಮಿಳಾ ಆಂಧ್ರಪ್ರದೇಶದ ಮಗಳು. ಅವರ ತಂದೆ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್‌. ರಾಜಶೇಖರ ರೆಡ್ಡಿ ಅವರು ತೆಲಂಗಾಣ ರಾಜ್ಯ ರಚನೆಯನ್ನು ವಿರೋಧಿಸಿದ್ದರು ಎಂದು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.   

ಶರ್ಮಿಳಾ ಅವರು ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಈಚೆಗೆ ಭೇಟಿಯಾಗಿದ್ದರು. ತದನಂತರ ಶರ್ಮಿಳಾ ಅವರ ಪಕ್ಷವು ಕಾಂಗ್ರೆಸ್‌ ಜೊತೆ ವಿಲೀನವಾಗುವ ಕುರಿತ ಊಹಾಪೋಹಗಳು ಹರಿದಾಡಲು ಆರಂಭಿಸಿವೆ. ಜುಲೈ 8ರಂದು ಕಡಪಾದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪಾಲ್ಗೊಳ್ಳಲಿದ್ದಾರೆ. ಆ ವೇಳೆ ಕಾಂಗ್ರೆಸ್‌ ಜೊತೆ ತಮ್ಮ ಪಕ್ಷವನ್ನು ಶರ್ಮಿಳಾ ಅವರು ವಿಲೀನ ಮಾಡಲಿದ್ದಾರೆ ಎನ್ನಲಾಗಿದೆ. 

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಅವರ ಸಹೋದರಿಯಾದ ಶರ್ಮಿಳಾ ಅವರು ಜಗನ್‌ ಮುಖ್ಯಸ್ಥಿಕೆಯ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದಿಂದ ಹೊರಬಂದು, 2021ರಲ್ಲಿ ವೈಎಸ್‌ಆರ್‌ ತೆಲಂಗಾಣ ಪಕ್ಷವನ್ನು ಸ್ಥಾಪಿಸಿದರು. ಬಳಿಕ, ಶರ್ಮಿಳಾ ತಾಯಿ ವಿಜಯಮ್ಮ ಅವರೂ ಮಗಳ ಪಕ್ಷಕ್ಕೆ ಸೇರ್ಪಡೆಯಾದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT