ಹೈದರಾಬಾದ್ (ಪಿಟಿಐ): ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಹೊಲದಲ್ಲಿ ಕೊರೆಯಲಾಗಿದ್ದ ಕೊಳವೆ ಬಾವಿಗೆ ಮೂರು ದಿನಗಳ ಹಿಂದೆ ಬಿದ್ದಿದ್ದ ನಾಲ್ಕು ವರ್ಷದ ಬಾಲಕಿ ಗಿರಿಜಾ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಕೊಳೆತ ಸ್ಥಿತಿಯಲ್ಲಿದ್ದ ಬಾಲಕಿ ಶವ ಸುಮಾರು 45 ಅಡಿ ಆಳದಲ್ಲಿ ಸಿಕ್ಕಿಹಾಕಿಕೊಂಡಿದೆ. ಶವ ಹೊರ ತೆಗೆಯುವ ಪ್ರಯತ್ನ ಮುಂದುವರಿದಿದೆ’ ಎಂದು ಪೊಲೀಸ್ ಅಧಿಕಾರಿ ರಾಮುಲು ನಾಯ್ಕ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.
‘ಬಾಲಕಿಯ ದೇಹ ಕೊಳೆತಿದೆ. ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.
ಮಂಚಾಲಾ ಗ್ರಾಮದಲ್ಲಿ ಭಾನುವಾರ ಹೊಲದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಬಾಲಕಿ ಕೊಳವೆಬಾವಿಗೆ ಬಿದ್ದಿದ್ದಳು. ಸುಮಾರು 300 ಅಡಿ ಆಳದ ಕೊಳವೆ ಬಾವಿಯನ್ನು ಆರು ತಿಂಗಳ ಹಿಂದೆ ಕೊರೆಯಲಾಗಿತ್ತು. ನೀರು ಬಾರದೇ ಇರುವ ಕಾರಣ ಅದನ್ನು ಮುಚ್ಚದೆ ಹಾಗೆಯೇ ಬಿಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಕೊಳವೆ ಬಾವಿ ಮುಚ್ಚದೆ ನಿರ್ಲಕ್ಷ್ಯ ವಹಿಸಿರುವ ಕುರಿತು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.