ಜಮ್ಮು (ಪಿಟಿಐ): ‘ವಿಧಾನಸಭಾ ಚುನಾವಣೆ ಎದುರಿಸಲು ನಾವು ಯಾವುದೇ ಚುನಾವಣಾ ಪೂರ್ವ ಒಕ್ಕೂಟಕ್ಕೆ ಸೇರುವುದಿಲ್ಲ, ಎಲ್ಲಾ 87 ಕ್ಷೇತ್ರಗಳಿಂದಲೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ’ ಎಂದು ಸಂಸದ ಮತ್ತು ಬಿಜೆಪಿಯ ಜಮ್ಮು ಮತ್ತು ಕಾಶ್ಮೀರ ಘಟಕದ ಮುಖ್ಯಸ್ಥ ಅವಿನಾಶ್ ರೈ ಖನ್ನಾ ಹೇಳಿದ್ದಾರೆ.
‘ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷವು ಶೀಘ್ರವೇ ಪ್ರಕಟಿಸಲಿದೆ. ಕಳಂಕಿತರಲ್ಲದ, ಉತ್ತಮ ಆಡಳಿತ ನೀಡಬಲ್ಲ ಅಭ್ಯರ್ಥಿಗಳನ್ನು ಪಕ್ಷ ಆಯ್ಕೆ ಮಾಡಲಿದೆ. ಈ ಕುರಿತು ಪಕ್ಷದ ಚುನಾವಣಾ ಸಮಿತಿ ಸೋಮವಾರ ಸಭೆ ನಡೆಸಲಿದೆ. ನಾವು 44ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವುದು ನಮ್ಮ ಮುಖ್ಯ ಗುರಿ, ಕಾಶ್ಮೀರದ ಜನತೆಗೆ ನಾವು ಭ್ರಷ್ಟಾಚಾರ, ಭಯದ ವಾತಾವರಣ ಮತ್ತು ರಾಜಕಾರಣದ ಏಕಸ್ವಾಮ್ಯದಿಂದ ಮುಕ್ತವಾದ ಆಡಳಿತ ನೀಡುತ್ತೇವೆ. ಜನರು ನಮಗೂ ಒಂದು ಅವಕಾಶ ನೀಡಬೇಕು’ ಎಂದು ಅವರು ಹೇಳಿದ್ದಾರೆ.