ಚೆನ್ನೈ(ಪಿಟಿಐ): ಇತ್ತೀಚಿಗಷ್ಟೇ ಮಂಗಳಯಾನ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಈಗ ಮರು ನವೀಕರಣಗೊಂಡಿರುವ ಜಿಎಸ್ಎಲ್ವಿ–ಡಿ5 ಉಡಾವಣೆಗೆ ಸಿದ್ಧಗೊಂಡಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾನುವಾರ ಸಂಜೆ 4:18ಕ್ಕೆ ಜಿಎಸ್ಎಲ್ವಿಡಿ–5 ರಾಕೆಟ್ ಉಡಾವಣೆಗೊಳ್ಳಲಿದ್ದು, ಶನಿವಾರ ಬೆಳಿಗ್ಗೆ 11:18ಕ್ಕೆ ಕ್ಷಣಗಣನೆ ಆರಂಭವಾಗಿದೆ.
‘ಸಂವಹನ ಉಪಗ್ರಹ ಜಿಸ್ಯಾಟ್–14 ಹೊತ್ತೊಯ್ಯಲಿರುವ 1980 ಕೆಜಿ ತೂಕದ ’ಜಿಎಸ್ಎಲ್ವಿಡಿ–5’ನ ಉಡಾವಣೆಗೆ 29 ಗಂಟೆಗಳ ಕ್ಷಣಗಣನೆ ಇಡಲಾಗಿದೆ. ಎಲ್ಲಾ ಕಾರ್ಯಗಳು ಸಮಗ್ರವಾಗಿ ನಡೆಯುತ್ತಿವೆ’ ಎಂದು ಇಸ್ರೊ ವಕ್ತಾರ ದೇವಿ ಪ್ರಸಾದ್ ಕಾರ್ಣಿಕ್ ಸುದ್ದಿಸಂಸ್ಥೆ ಗೆ ತಿಳಿಸಿದ್ದಾರೆ.
ಸ್ವದೇಶಿ ನಿರ್ಮಿತ ಕ್ರಯೊಜೆನಿಕ್ ಎಂಜಿನ್ ಬಳಸಿ ಜಿಎಸ್ಎಲ್ವಿ–ಡಿ5 ಉಪಗ್ರಹವನ್ನು ಕಳೆದ ವರ್ಷ ಆಗಸ್ಟ್ 19ರಂದು ಉಡಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ರಾಕೆಟ್ನ ಎರಡನೇ ಹಂತದಲ್ಲಿ ಇಂಧನ ಸೋರಿಕೆಯಾದ ಕಾರಣ ಉಡಾವಣೆ ಸ್ಥಗಿತಗೊಳಿಸಲಾಗಿತ್ತು.