ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನವ ಭಾರತಕ್ಕೆ ಒಗ್ಗಟ್ಟಿನ ಪ್ರಯತ್ನ ಅಗತ್ಯ’

Last Updated 15 ಜೂನ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಜ್ಯ ಮತ್ತು ಕೇಂದ್ರ ಸರ್ಕಾರ ಒಗ್ಗಟ್ಟಾಗಿ ಶ್ರಮಿಸಿದರೆ 2022ರ ವೇಳೆಗೆ ‘ನವ ಭಾರತ’ ನಿರ್ಮಾಣದ ಕನಸನ್ನು ಈಡೇರಿಸಲು ಸಾಧ್ಯ. ‘ಸ್ವಚ್ಛ ಭಾರತ ಅಭಿಯಾನ’ ಮತ್ತು ‘ಪ್ರಧಾನ ಮಂತ್ರಿ ಆವಾಸ್‌ ಯೋಜನೆ’ ಈ ದಿಕ್ಕಿನಲ್ಲಿ ಇಟ್ಟಿರುವ ಪರಿಣಾಮಕಾರಿ ಹೆಜ್ಜೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.

ನೀತಿ ಆಯೋಗದ ಸಭೆಯಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಅವರು ಶನಿವಾರ ಉದ್ಘಾಟನಾ ಭಾಷಣ ಮಾಡಿದರು. ‘ಪ್ರತಿಯೊಬ್ಬ ಭಾರತೀಯನನ್ನೂ ಸಶಕ್ತಗೊಳಿಸಬೇಕು, ಒಳ್ಳೆಯ ಜೀವನದ ಭರವಸೆ ನೀಡಬೇಕು. ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನಾಚರಣೆಯ ಸಂದರ್ಭಕ್ಕೆ ನಿಗದಿ ಮಾಡಿರುವ ಗುರಿಗಳನ್ನು ಅಕ್ಟೋಬರ್‌ 2ರ ಒಳಗೆ ಸಾಧಿಸಬೇಕು. 75ನೇ ಸ್ವಾತಂತ್ರ್ಯೋತ್ಸವದ (2022) ಸಂದರ್ಭಕ್ಕೆ ನಿಗದಿ ಮಾಡಿರುವ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ದಾಪುಗಾಲು ಹಾಕಬೇಕು’ ಎಂದರು.

‘2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಾತಿಗೆ ಸರ್ಕಾರ ಬದ್ಧವಾಗಿದೆ’ ಎಂದ ಮೋದಿ, ‘ಈ ಗುರಿ ಸಾಧಿಸಬೇಕಾದರೆ ಮೀನುಗಾರಿಕೆ, ಹೈನುಗಾರಿಕೆ, ತೋಟಗಾರಿಕೆ ಹಾಗೂ ಹಣ್ಣು ಮತ್ತು ತರಕಾರಿ ಬೆಳೆಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ‘ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ಯ ಸೌಲಭ್ಯಗಳು ಸಕಾಲದಲ್ಲಿ ರೈತರಿಗೆ ತಲುಪುವಂತೆ ಮಾಡಬೇಕು’ ಎಂದರು.

ಕೃಷಿ ಕ್ಷೇತ್ರದಲ್ಲಿ ರಚನಾತ್ಮಕ ಬದಲಾವಣೆಯನ್ನು ಮಾಡಬೇಕಾದ ಅಗತ್ಯವನ್ನು ಒತ್ತಿ ಹೇಳಿದ ಮೋದಿ, ‘ಈ ಕ್ಷೇತ್ರದಲ್ಲಿ ಕಾರ್ಪೊರೇಟ್‌ ಹೂಡಿಕೆ ಆಗಬೇಕು, ಸರಕು ಸಾಗಾಣಿಕೆ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಮತ್ತು ರೈತರಿಗೆ ಒಳ್ಳೆಯ ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕು. ಆಹಾರ ಧಾನ್ಯ ಉತ್ಪಾದನೆಗಿಂತಲೂ ಆಹಾರ ಸಂಸ್ಕರಣಾ ಉದ್ದಿಮೆ ಅಭಿವೃದ್ಧಿ ಹೊಂದಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT