ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಒಳಜಗಳಕ್ಕೆ ಕೊನೆಗೂ ತಲೆದಂಡ:ಮೋದಿ ವೈರಿ ಜೋಷಿ ರಾಜೀನಾಮೆ

Last Updated 8 ಜೂನ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ಒಳಜಗಳಕ್ಕೆ ಕೊನೆಗೂ ಸಂಜಯ್ ಜೋಷಿ `ತಲೆದಂಡ~ವಾಗಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ `ಕಡು ವೈರಿ~ ಜೋಷಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಇವರ ರಾಜೀನಾಮೆ ಅಂಗೀಕರಿಸಿದ್ದಾರೆ.

ಮುಂಬೈ ಬಿಜೆಪಿ ಕಾರ್ಯಕಾರಿಣಿಯಿಂದ ಜೋಷಿ ಅವರನ್ನು ದೂರವಿಡುವಲ್ಲಿ ಸಫಲರಾಗಿದ್ದ ನರೇಂದ್ರ ಮೋದಿ, ಈಗ ಅವರನ್ನು ಪಕ್ಷ ತ್ಯಜಿಸುವಂತೆ ಮಾಡು   ವಲ್ಲಿಯೂ ಯಶಸ್ವಿ ಆಗಿದ್ದಾರೆ. ಜೋಷಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಪ್ರಕಟಿಸಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ತಮ್ಮನ್ನು ಬಿಜೆಪಿಗೆ ವಾಪಸ್ ಕರೆತಂದಿದ್ದ ಕ್ರಮ ಗಡ್ಕರಿ ಹಾಗೂ ಮೋದಿ ನಡುವೆ ಮನಸ್ತಾಪಕ್ಕೆ ಕಾರಣವಾಗಿತ್ತು. ಅದನ್ನು ದೂರಮಾಡುವ ಉದ್ದೇಶದಿಂದ ಜೋಷಿ ರಾಜೀನಾಮೆ ನೀಡಿದ್ದಾರೆ.
`ಆರ್‌ಎಸ್‌ಎಸ್ ಮಾಜಿ ಪ್ರಚಾರಕ ಹಾಗೂ ಪ್ರಧಾನ ಕಾರ್ಯದರ್ಶಿ ಆಗಿದ್ದ ಸಂಜಯ್ ಜೋಷಿ ತಮ್ಮನ್ನು ಪಕ್ಷದಿಂದ ಬಿಡುಗಡೆ ಮಾಡುವಂತೆ ಕೇಳಿದ್ದರು. ಅವರ ಮನವಿ ಒಪ್ಪಿಕೊಂಡು  ಬಿಡುಗಡೆ ಮಾಡಲಾಗಿದೆ~ ಎಂದು ಗಡ್ಕರಿ ತಿಳಿಸಿದ್ದಾರೆ.

ಎರಡನೇ ಅವಧಿಗೆ ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಗಡ್ಕರಿ ಅವಗೆ ಸದ್ಯ ಮೋದಿ ಅವರಿಂದ ಯಾವುದೇ ವಿರೋಧವೂ ವ್ಯಕ್ತವಾಗುವುದಿಲ್ಲ ಎಂದು ಬಿಜೆಪಿ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
ಬಿಜೆಪಿಯಲ್ಲಿ ಜೋಷಿ ಅವರಿಗೆ ಯಾವುದೇ ಸ್ಥಾನಮಾನ ಕೊಡಬಾರದೆಂದು ಪಟ್ಟು ಹಿಡಿದಿದ್ದ ಮೋದಿ ಇಂದಿನ ಬೆಳವಣಿಗೆಯಿಂದ ಇನ್ನಷ್ಟು ಪ್ರಬಲರಾಗಿದ್ದಾರೆ.

ಜೋಷಿ ಮೇ 24ರಂದು ರಾಷ್ಟ್ರೀಯ ಕಾರ್ಯಕಾರಿಣಿಗೆ ರಾಜೀನಾಮೆ ನೀಡಿದ ಬಳಿಕ ನರೇಂದ್ರ ಮೋದಿ ಮುಂಬೈ ಕಾರ್ಯಕಾರಿಣಿಗೆ ಧಾವಿಸಿದ್ದರು. ಇದು ಆರ್‌ಎಸ್‌ಎಸ್ ಹಾಗೂ ಬಿಜೆಪಿಯಲ್ಲಿ ಒಡಕು ಹುಟ್ಟುಹಾಕಿತ್ತು. ಬಿಜೆಪಿಯಲ್ಲಿ ಒಡಕಿಲ್ಲ ಎಂದು ತೋರ್ಪಡಿಸಲು ಕಾರ್ಯಕಾರಿಗೆ ರಾಜೀನಾಮೆ ನೀಡುವಂತೆ ಜೋಷಿ ಅವರಿಗೆ ಗಡ್ಕರಿ ಸೂಚಿಸಿದ್ದರು. 

ಅನಂತರ ಬಿಜೆಪಿ ಮುಖವಾಣಿ `ಕಮಲ ಸಂದೇಶ್~ ಹಾಗೂ ಆರ್‌ಎಸ್‌ಎಸ್ ಮುಖವಾಣಿ `ಪಾಂಚಜನ್ಯ~ ಪತ್ರಿಕೆಯಲ್ಲಿ ಮೋದಿ ಅವರನ್ನು ಕಟುವಾಗಿ ಟೀಕೆ ಮಾಡಲಾಗಿತ್ತು. ಇನ್ನೊಂದು ಆರ್‌ಎಸ್‌ಎಸ್ ಪತ್ರಿಕೆ `ಆರ್ಗನೈಸರ್~ ಮೋದಿ ಪರ ವಕಾಲತ್ತು ವಹಿಸಿತ್ತು. ಈ ಇಬ್ಬರ ಕಿತ್ತಾಟ ಅಷ್ಟಕ್ಕೇ ನಿಲ್ಲಲಿಲ್ಲ. ಸಂಜಯ್ ಜೋಷಿ ಪರವಾಗಿ ಮೋದಿ ವಿರುದ್ಧವಾಗಿ ಅಹಮದಾಬಾದ್ ಮುಖ್ಯ ರಸ್ತೆಗಳು ಹಾಗೂ ಬಿಜೆಪಿ ಕೇಂದ್ರ ಕಚೇರಿ ಬಳಿ `ಪೋಸ್ಟರ್~ಗಳು ಕಾಣಿಸಿಕೊಂಡವು. ಶುಕ್ರವಾರವೂ ಇಂಥ ಪೋಸ್ಟರ್‌ಗಳು ಕಂಡುಬಂದವು.

ಬಿಜೆಪಿ ತೊರೆದಿರುವ ಜೋಷಿ ಈಗ ಆರ್‌ಎಸ್‌ಎಸ್ ಕಾರ್ಯಕರ್ತರಾಗಿ ಮುಂದುವರಿಯಲಿದ್ದಾರೆ. ಉತ್ತರ ಪ್ರದೇಶ ಸ್ಥಳೀಯ ಸಂಸ್ಥಗಳಿಗೆ ನಡೆಯುವ ಚುನಾವಣೆ ಜವಾಬ್ದಾರಿಯನ್ನು ಜೋಷಿ ಅವರಿಗೆ ವಹಿಸಲಾಗಿತ್ತು. ಆದರೆ, ಪಕ್ಷಕ್ಕೇ ನೀಡಿರುವ ರಾಜೀನಾಮೆಯಿಂದ ಆರ್‌ಎಸ್‌ಎಸ್‌ಗಷ್ಟೇ ಅವರು ಸೀಮಿತಗೊಳ್ಳಲಿದ್ದಾರೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

2005ರಲ್ಲಿ `ಲೈಂಗಿಕ ಸಿಡಿ ವಿವಾದ~ದಲ್ಲಿ ಸಿಕ್ಕಿಕೊಂಡು ಪಕ್ಷದಿಂದ ಹೊರ ಹಾಕಲ್ಪಟ್ಟ ಸಂಜಯ್ ಜೋಷಿ ಅವರನ್ನು ಗಡ್ಕರಿ ಕಳೆದ ಸೆಪ್ಟೆಂಬರ್ ಮರಳಿ ಪಕ್ಷಕ್ಕೆ ಕರೆತಂದಿದ್ದರು. ಅವರಿಗೆ ಉತ್ತರ ಪ್ರದೇಶ ಚುನಾವಣೆ ಹೊಣೆ ನೀಡಲಾಗಿತ್ತು.

ಜೋಷಿ ರಾಜೀನಾಮೆ ಹಿನ್ನೆಲೆಯಲ್ಲಿ ರಾಜ್‌ಕೋಟ್‌ನಲ್ಲಿ ಶನಿವಾರದಿಂದ ಎರಡು ದಿನ ನಡೆಯಲಿರುವ ಗುಜರಾತ್ ಬಿಜೆಪಿ ಸಭೆ ತೀವ್ರ ಕುತೂಹಲ ಕೆರಳಿಸಿದೆ. ಮೋದಿ ಮತ್ತು ಜೋಷಿ ಅವರ ಕಿತ್ತಾಟ  ಗುಜರಾತ್ ವಿಧಾನಸಭೆಗೆ ಈ ವರ್ಷ ನಡೆಯಲಿರುವ ಚುನಾವಣೆ ಮೇಲೆ ಬೀರಬಹುದಾದ ಪರಿಣಾಮ ಕುರಿತು ಬಿಜೆಪಿ ನಾಯಕರ ಆತಂಕಕ್ಕೆ ಕಾರಣವಾಗಿದೆ.

ಜೋಷಿ ರಾಜೀನಾಮೆ ಕುರಿತು ಪ್ರತಿಕ್ರಿಯಿಸಲು ಬಿಜೆಪಿ ಕೇಂದ್ರ ಸಮಿತಿ ನಿರಾಕರಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್ ಜಾವಡೇಕರ್ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಬಯಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT