ನವದೆಹಲಿ (ಪಿಟಿಐ): ‘ಒಂದು ವೇಳೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್, ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ಬಂದರೆ ಅವರಿಗೆ ಮೋದಿ ಚಿಕನ್ ಬಿರಿಯಾನಿಯ ಆತಿಥ್ಯ ನೀಡುತ್ತಾರೆಯೇ?’ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಲೇವಡಿ ಮಾಡಿದ್ದಾರೆ.
ಕಳೆದ ವರ್ಷ ಭಾರತಕ್ಕೆ ಖಾಸಗಿ ಭೇಟಿ ನೀಡಿದ್ದ ಪಾಕಿಸ್ತಾನದ ಅಂದಿನ ಪ್ರಧಾನಿ ರಾಜಾ ಪರ್ವೇಜ್ ಅಶ್ರಫ್ ಅವರಿಗೆ ಚಿಕನ್ ಬಿರಿಯಾನಿ ಆತಿಥ್ಯ ನೀಡಿದ್ದ ಕಾಂಗ್ರೆಸ್ ನಾಯಕರನ್ನು ಮೋದಿ ಕಟುವಾದ ಶಬ್ದಗಳಲ್ಲಿ ಟೀಕಿಸಿದ್ದರು.
ಭಾಗಪತ್ ಸಾರ್ವಜನಿಕ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಮೋದಿ, 2013ರಲ್ಲಿ ಭಾರತದ ಯೋಧನ ಶಿರಚ್ಛೇದ ಮಾಡಿದ ಪಾಕಿಸ್ತಾನದಂತಹ ದೇಶದ ಪ್ರಧಾನಿಗೆ ಚಿಕನ್ ಬಿರಿಯಾನಿ ಆತಿಥ್ಯ ನೀಡಿದ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಮೋದಿ ಬಿರಿಯಾನಿ ಟೀಕೆಗೆ ಮತ್ತದೇ ಚಿಕನ್ ಬಿರಿಯಾನಿ ಮೂಲಕ ತಿರುಗೇಟು ನೀಡಿರುವ ತರೂರ್ ಅವರ ಟ್ವೀಟ್ ಅನ್ನು 681 ಬಾರಿ ಮರು ಟ್ವೀಟ್ ಮಾಡಲಾಗಿದೆ. 415 ಜನರು ಮೆಚ್ಚುಗೆ ಸೂಚಿಸಿದ್ದಾರೆ.