ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿ ಕೇರಳದ ವಲಸಿಗರು

ಇರಾಕ್‌, ಯೆಮನ್‌ ಆಂತರಿಕ ಬಿಕ್ಕಟ್ಟು: ಪುನರ್ವಸತಿಗೆ ಸರ್ಕಾರದ ಪ್ರಯತ್ನ
Last Updated 12 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದ  46 ನರ್ಸ್‌ಗಳು ಕಳೆದ ವರ್ಷ  ಜುಲೈನಲ್ಲಿ ಐಎಸ್‌್ ಉಗ್ರರ ಒತ್ತೆಸೆರೆಯಿಂದ ಬಿಡುಗಡೆಯಾಗಿ ಸಂಘರ್ಷ ಪೀಡಿತ  ಇರಾಕ್‌ನಿಂದ ಕೊಚ್ಚಿಗೆ ಮರಳಿದಾಗ ಎಲ್ಲರೂ ಅವರನ್ನು ಖುಷಿಯಿಂದ ಬರಮಾಡಿಕೊಂಡಿದ್ದರು.  ಇರಾಕ್‌ನಂತೆಯೇ ಯೆಮನ್‌ನಿಂದಲೂ ರಾಜ್ಯದ ವಲಸಿಗರು  ವಾಪಸಾಗುತ್ತಿದ್ದಾರೆ.

ಯೆಮನ್‌ನಿಂದ ತೆರವುಗೊಂಡ ರಾಜ್ಯದ ಪ್ರಜೆಗಳಿಗೆ ಪುನರ್ವಸತಿ ಕಲ್ಪಿಸುವುದಕ್ಕಾಗಿ  ಅನಿವಾಸಿ ಕೇರಳಿಗರ ವ್ಯವಹಾರ ಇಲಾಖೆ (ಎನ್‌ಒಆರ್‌ಕೆಎ–ನೊರ್ಕಾ)   ನಿರಂತರವಾಗಿ ಜಂಟಿ ಪ್ರಯತ್ನ ಮಾಡುತ್ತಿದೆ.  ಇರಾಕ್‌ನಿಂದ ಮರಳಿದ ವಲಸಿಗರಿಗೆ ಉದ್ಯೋಗ ಹಾಗೂ ಇತರ  ಅನುಕೂಲ ಒದಗಿಸಿಕೊಡುವುದಕ್ಕಾಗಿ ಸರ್ಕಾರವು 9 ತಿಂಗಳ ಅವಧಿಯಲ್ಲಿ ಸರಣಿ ಸಭೆಗಳನ್ನು ನಡೆಸಿದೆ. 

ಇವರೆಲ್ಲರಿಗೆ ಉದ್ಯೋಗ ಒದಗಿಸುವ ಕೆಲಸ ವಿವಿಧ ಹಂತದಲ್ಲಿ ಇದೆ ಎನ್ನುತ್ತಾರೆ ನೊರ್ಕಾ  ಅಧಿಕಾರಿಗಳು. ಇಡುಕ್ಕಿಯ ನರ್ಸ್‌ ಶಾಂತಿ ಪಿ ಜಾನ್‌್ (26) ಅವರಿಗೆ ಇರಾಕ್‌ನಿಂದ ಮರಳಿದ ನಾಲ್ಕು ತಿಂಗಳಿನಲ್ಲಿಯೇ ಅಬುಧಾಬಿಯಲ್ಲಿ ಕೆಲಸ ಸಿಕ್ಕಿದೆ.  ‘ಇಲ್ಲಿಗಿಂತ ವಿದೇಶದಲ್ಲಿ ಕೆಲಸ ಮಾಡಿದರೇ ಕುಟುಂಬಕ್ಕೆ ಹೆಚ್ಚು ನೆರವಾಗಬಹುದು. ನಾವು ಸಾಲ ಕಟ್ಟಬೇಕಾಗಿದೆ. ನಮ್ಮ ಮುಂದೆ ಹೆಚ್ಚಿನ ಆಯ್ಕೆಗಳು ಇರಲಿಲ್ಲ’ ಎನ್ನುತ್ತಾರೆ ಶಾಂತಿಯವರ ತಾಯಿ ಶಾಂತಮ್ಮ.

ನೊರ್ಕಾ, 2013ರಲ್ಲಿ  ನಡೆಸಿದ ಜಂಟಿ ಸಹಭಾಗಿತ್ವದ ಸಮೀಕ್ಷೆಯ ಪ್ರಕಾರ ಕೇರಳದ ಸುಮಾರು 16 ಲಕ್ಷ ಮಂದಿ ವಿಶ್ವದಾದ್ಯಂತ ಕೆಲಸ ಮಾಡುತ್ತಿದ್ದಾರೆ.  ಈ ಪೈಕಿ ಸುಮಾರು ಶೇ 90ರಷ್ಟು ವಲಸಿಗರು ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ. ಸಂಯುಕ್ತ ಅರಬ್‌ ಒಕ್ಕೂಟ ಹಾಗೂ ಸೌದಿ ಅರೇಬಿಯಾದಲ್ಲಿ ಕ್ರಮವಾಗಿ ಶೇ 35 ಹಾಗೂ ಶೇ 28ರಷ್ಟು ಮಂದಿ ಇದ್ದಾರೆ. 

ನೇಮಕಾತಿ ವಂಚನೆ, ವೇತನ ಬಾಕಿ  ಹಾಗೂ ಉದ್ಯೋಗದಾತರಿಂದ ಪ್ರವಾಸ ದಾಖಲೆ ಮತ್ತು ಪಾಸ್‌ಪೋರ್ಟ್‌ ಮರಳಿ ಪಡೆದುಕೊಳ್ಳುವುದಕ್ಕೆ ಅನುಭವಿಸಿದ ಸಂಕಷ್ಟಗಳನ್ನು ಇರಾಕ್‌, ಲಿಬಿಯಾ ಹಾಗೂ ಯೆಮನ್‌ನಿಂದ ಮರಳಿದ ವಲಸಿಗರು ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗ ಪಡೆಯುವುದಕ್ಕಾಗಿ ಅನೇಕರು ನೇಮಕಾತಿ ಸಂಸ್ಥೆಗಳು ಹಾಗೂ ಮಧ್ಯವರ್ತಿಗಳಿಗೆ  ಲಕ್ಷಗಟ್ಟಲೆ ದುಡ್ಡು ಕೊಟ್ಟಿದ್ದಾರೆ.

ವಲಸೆಗೆ ಕಾರಣ: ‘ಆರ್ಥಿಕ ಕಾರಣಗಳಿಂದಾಗಿ ರಾಜ್ಯದ ಜನ ಕೊಲ್ಲಿ ರಾಷ್ಟ್ರಗಳಿಗೆ ವಲಸೆ ಹೋಗುತ್ತಾರೆ.  ಹಣ ಮಾಡುವ ಉದ್ದೇಶದಿಂದ ಅವರು ಕುಟುಂಬ ತೊರೆದು ವಿದೇಶ ಪ್ರಯಾಣ ಮಾಡುತ್ತಾರೆ.  ಆದರೆ ಅವರು ತಮ್ಮ ಗುರಿ ಸಾಧಿಸುವವರೆಗೆ ಎಷ್ಟು ತ್ಯಾಗ ಮಾಡುತ್ತಾರೆ ಎನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಿದೆ’ ಎಂದು ತಿರುವನಂತರಪುರದಲ್ಲಿರುವ ಅಭಿವೃದ್ಧಿ ಅಧ್ಯಯನ ಕೇಂದ್ರದ ಪ್ರೊ.ಎಸ್‌. ಇರುದಯ ರಾಜನ್‌ ಹೇಳುತ್ತಾರೆ. ‘ಆರ್ಥಿಕ ಪ್ರಯೋಜನಗಳನ್ನು ಅಳೆಯಬಹುದು. ಆದರೆ ವಲಸೆಯ ಸಾಮಾಜಿಕ ಪರಿಣಾಮಗಳನ್ನು ಅಳೆಯುವುದಕ್ಕೆ ಸಾಧ್ಯವಿಲ್ಲ’ ಎಂದೂ ಹೇಳುತ್ತಾರೆ.

ಯೆಮನ್‌್ ಸೇರಿದಂತೆ ವಿವಿಧ ಕಡೆ ರಾಜಕೀಯ ಕ್ಷೋಭೆ ಉಂಟಾಗಿದ್ದರೂ  ಕೇರಳದ ನರ್ಸ್‌ಗಳು ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಲು ಇಷ್ಟಪಡುತ್ತಾರೆ. ಇಲ್ಲಿಗಿಂತ  ವಿದೇಶಗಳಲ್ಲಿ ಹೆಚ್ಚಿನ ಸಂಬಳ ಸಿಗುತ್ತದೆ ಎನ್ನುವ ಒಂದೇ ಕಾರಣಕ್ಕೆ ಅವರು ಈ ಆಯ್ಕೆ ಮಾಡಿಕೊಳ್ಳುತ್ತಾರೆ. ಸುಮಾರು 90 ಸಾವಿರ ನರ್ಸ್‌ಗಳು ವಿದೇಶ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಸ್ವ ಉದ್ಯೋಗ ಕಾರ್ಯಕ್ರಮ: ರಾಜ್ಯಕ್ಕೆ ಮರಳಿದ ವಲಸಿಗರಿಗಾಗಿ ಅನಿವಾಸಿ ಕೇರಳಿಗರ ವ್ಯವಹಾರ ಇಲಾಖೆಯ ಅಂಗ ಸಂಸ್ಥೆ (ನೊರ್ಕಾ–ರೂಟ್ಸ್‌) ಸ್ವ–ಉದ್ಯೋಗ ಕಾರ್ಯಕ್ರಮ ನಡೆಸುತ್ತಿದೆ. ‘2014ರ ಜುಲೈನಿಂದ ಸುಮಾರು 500ಮಂದಿಯನ್ನು ಸಂದರ್ಶಿಸಲಾಗಿದೆ.   ಇವರಲ್ಲಿ 300 ಜನರನ್ನು ಪರಿಗಣಿಸಲಾಗಿದೆ. 40 ಮಂದಿಗೆ ಉದ್ಯೋಗ ಸಿಕ್ಕಿದೆ’ ಎಂದು ನೊರ್ಕಾ–ರೂಟ್ಸ್‌ ಮುಖ್ಯಕಾರ್ಯನಿರ್ವಹಣಾಧಿಕಾರಿ ಆರ್‌.ಎಸ್‌.ಕಣ್ಣನ್‌ ಹೇಳುತ್ತಾರೆ.

ಇರಾಕ್‌ನಿಂದ ಮರಳಿರುವ ನರ್ಸ್‌ಗಳಲ್ಲಿ ಒಬ್ಬರಾಗಿರುವ, ಕೊಟ್ಟಾಯಂ ಜಿಲ್ಲೆಯ ಪುದುಪಲ್ಲಿಯ ಶ್ರುತಿ ಶಶಿಕುಮಾರ್‌್ ಅವರಿಗೆ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿದೆ.  ಆದರೆ ಕತಾರ್‌ನಲ್ಲಿ ಕೆಲಸ ಸಿಗಬಹುದು ಎಂದು ಅವರ ಕುಟುಂಬ ಎದುರು ನೋಡುತ್ತಿದೆ.

‘ಸಂಘರ್ಷ ಪೀಡಿತ ದೇಶಗಳಿಗೆ ನಾವು  ಅವಳನ್ನು ಮತ್ತೆ ಕಳಿಸುವುದಿಲ್ಲ. ಇಲ್ಲಿ ನಮ್ಮ ಮಗಳಿಗೆ  ಪ್ರತಿ ತಿಂಗಳು ₹ 12 ಸಾವಿರ ಮಾತ್ರ ಸಿಗುತ್ತದೆ. ಆದ ಕಾರಣ ಆಕೆ  ಹೊರ ದೇಶಕ್ಕೆ ಹೋಗಬೇಕಾಗಿದೆ’ ಎಂದು ಶ್ರುತಿ ತಂದೆ ಶಶಿಕುಮಾರ್‌್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT