ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

IPL: ಬೆಂಗಳೂರಿನಲ್ಲಿ RCB-CSK ಪಂದ್ಯ- ಕ್ರೀಡಾಂಗಣ ಸುತ್ತಮುತ್ತ ಬಿಗಿ ಭದ್ರತೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 18ರಂದು ಐಪಿಎಲ್ ಕ್ರಿಕೆಟ್ ಪಂದ್ಯ ನಡೆಯಲಿದ್ದು, ಕ್ರೀಡಾಂಗಣ ಸುತ್ತಮುತ್ತ ಬಿಗಿ ಭದ್ರತೆ
Published 18 ಮೇ 2024, 2:59 IST
Last Updated 18 ಮೇ 2024, 2:59 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 18ರಂದು  ಐಪಿಎಲ್ ಕ್ರಿಕೆಟ್ ಪಂದ್ಯ ನಡೆಯಲಿದ್ದು, ಕ್ರೀಡಾಂಗಣ ಸುತ್ತಮುತ್ತ ಬಿಗಿ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ (ಸಿಎಸ್‌ಕೆ) ತಂಡಗಳ ನಡುವೆ ಪಂದ್ಯ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಕ್ರೀಡಾಂಗಣಕ್ಕೆ ಬರುವ ನಿರೀಕ್ಷೆ ಇದೆ. ಕ್ರೀಡಾಂಗಣದ ಪ್ರವೇಶ ದ್ವಾರ ಹಾಗೂ ಅಕ್ಕ–ಪಕ್ಕದ ಸ್ಥಳಗಳಲ್ಲಿಯೂ ಪೊಲೀಸರು ಭದ್ರತೆ ಕೈಗೊಳ್ಳಲಿದ್ದಾರೆ.

ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಹಾಗೂ ಶ್ವಾನದಳದ ಸಿಬ್ಬಂದಿ, ಕ್ರೀಡಾಂಗಣ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಶುಕ್ರವಾರ ಪರಿಶೀಲನೆ ನಡೆಸಿದರು.

ಕ್ರೀಡಾಂಗಣ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ, ಸಂಚಾರ ಪೊಲೀಸರು ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದ್ದಾರೆ.

‘ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಕಬ್ಬನ್ ರಸ್ತೆ, ಕ್ವೀನ್ಸ್ ರಸ್ತೆ, ಎಂ.ಜಿ. ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಬಾ ರಸ್ತೆ, ವಿಧಾನಸೌಧ–ಹೈಕೋರ್ಟ್ ಎದುರಿನ ರಸ್ತೆ, ಟ್ರಿನಿಟಿ ರಸ್ತೆ, ಲ್ಯಾವೆಲ್ಲೆ ರಸ್ತೆ, ವಿಠ್ಠಲ್ ಮಲ್ಯ ರಸ್ತೆ, ನೃಪತುಂಗ ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿರ್ಬಂಧಿಸಲಾಗಿದೆ’ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

‘ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬರುವ ಜನರು, ತಮ್ಮ ವಾಹನಗಳನ್ನು ಸೇಂಟ್ ಜೋಸೆಫ್ ಇಂಡಿಯಾ ಸ್ಕೂಲ್ ಮೈದಾನ, ಯು.ಬಿ ಸಿಟಿ, ಶಾಂತಿನಗರ ಬಿಎಂಟಿಸಿ ಬಸ್‌ ನಿಲ್ದಾಣದ ಪಾರ್ಕಿಂಗ್ ಜಾಗ ಹಾಗೂ ಕಿಂಗ್ಸ್ ರಸ್ತೆಯಲ್ಲಿ ನಿಲ್ಲಿಸಬಹುದು. ಜನರು, ಮೆಟ್ರೊ ಹಾಗೂ ಬಸ್‌ ಬಳಸಬೇಕು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT