ನವದೆಹಲಿ (ಪಿಟಿಐ): ಸ್ವಾತಂತ್ರ್ಯೋತ್ಸವದ ಚೊಚ್ಚಲ ಭಾಷಣ ಸಿದ್ಧಪಡಿಸಿಕೊಳ್ಳುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಸಚಿವಾಲಯಗಳಿಂದ ಮಾಹಿತಿ ಕೇಳಿದ್ದಾರೆ.
ಐತಿಹಾಸಿಕ ಕೆಂಪು ಕೋಟೆಯಲ್ಲಿ ಆಗಸ್ಟ್್ 15ರಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿರುವ ಮೋದಿ ಅವರ ಭಾಷಣದಲ್ಲಿ ಮೂಲಸೌಕರ್ಯ ಹಾಗೂ ಕೌಶಲ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಹಣದುಬ್ಬರ ನಿಯಂತ್ರಣ ಹಾಗೂ ದೇಶದಾದ್ಯಂತ 100 ಸುಸಜ್ಜಿತ ನಗರಗಳ ನಿರ್ಮಾಣ ಸೇರಿದಂತೆ ಹಲವಾರು ವಿಷಯಗಳು ಪ್ರಸ್ತಾಪವಾಗಲಿವೆ ಎಂದು ನಿರೀಕ್ಷಿಸಲಾಗಿದೆ.
ಬಜೆಟ್ನಲ್ಲಿ ಘೋಷಿಸಲಾದ ಪ್ರಸ್ತಾವನೆಗಳ ಅನುಷ್ಠಾನಕ್ಕೆ ಸಿದ್ಧಪಡಿಸಿಕೊಂಡಿರುವ ರೂಪುರೇಷೆಗಳ ವಿವರ ನೀಡುವಂತೆ ಹಣಕಾಸು ಸಚಿವಾಲಯವು ಇತರ ಸಚಿವಾಲಯಗಳು ಹಾಗೂ ಇಲಾಖೆಗಳಿಗೆ ಪತ್ರ ಬರೆದಿದೆ. ಜುಲೈ ಅಂತ್ಯದೊಳಗೆ ಈ ಎಲ್ಲ ಮಾಹಿತಿಗಳನ್ನು ಕಳಿಸುವಂತೆ ಸೂಚಿಸಲಾಗಿದೆ.
‘ಸಂಪುಟ ಕಾರ್ಯದರ್ಶಿ ಅಜಿತ್ ಸೇಥ್ ಈ ಮಾಹಿತಿಗಳನ್ನು ಪರಿಶೀಲಿಸುವರು. ಪ್ರಧಾನಿ ಭಾಷಣದಲ್ಲಿ ಯಾವೆಲ್ಲ ಅಂಶಗಳು ಇರಬೇಕು ಎನ್ನುವುದರ ಬಗ್ಗೆ ಆಗಸ್ಟ್ 10ರೊಳಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ.