ವಾರಾಣಸಿ (ಪಿಟಿಐ): ನರೇಂದ್ರ ಮೋದಿ ಅವರ ವೈವಾಹಿಕ ಮಾಹಿತಿ ಪ್ರಸ್ತಾಪಿಸಿ ಕಾಂಗ್ರೆಸ್ ದಾಳಿ ಮಾಡಿದ ಬೆನ್ನಲ್ಲೇ ಬಿಜೆಪಿ ಬೆಂಬಲಿಗರು ಅದಕ್ಕೆ ಪ್ರತ್ಯುತ್ತರವೆಂಬಂತೆ ಹುಬ್ಬೇರಿಸುವಂತಹ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
ಈ ಭಿತ್ತಿಪತ್ರಗಳಲ್ಲಿ ಮೋದಿ ಅವರನ್ನು ‘ದೇಶಪ್ರೇಮಿ’ ಎಂದು ಹೇಳಲಾಗಿದ್ದರೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಾಯಕರನ್ನು ‘ಪತ್ನಿ ಪ್ರೇಮಿ’ಗಳು ಎಂದು ಬಿಂಬಿಸಲಾಗಿದೆ.
ಜವಾಹರಲಾಲ್ ನೆಹರೂ ಅವರು ಲಾರ್ಡ್ ಮೌಂಟ್ಬ್ಯಾಟೆನ್ ಅವರ ಪತ್ನಿ ಎಡ್ವಿನಾ ಜತೆ ಇರುವ, ರಾಹುಲ್ ಗಾಂಧಿ ಅವರನ್ನು ಪಕ್ಷದ ಕಾರ್ಯಕರ್ತೆಯೊಬ್ಬರು ಅಪ್ಪಿಕೊಂಡಿರುವ ಮತ್ತು ಶಶಿ ತರೂರ್ ಅವರು ಪತ್ನಿ ಸುನಂದಾ ಪುಷ್ಕರ್ (ಈಗ ದಿವಂಗತರು) ಜತೆ ಇರುವ ಚಿತ್ರಗಳೂ ಈ ಪೋಸ್ಟರ್ನಲ್ಲಿದೆ.
ಅಲ್ಲದೆ, ಕಾಂಗ್ರೆಸ್ನ ದಿಗ್ವಿಜಯ್ ಸಿಂಗ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ಮೊಹಮ್ಮದ್ ಅಜಂ ಖಾನ್ ಅವರ ಚಿತ್ರಗಳನ್ನು ಭಿತ್ತಿಪತ್ರದಲ್ಲಿ ಅಚ್ಚುಹಾಕಲಾಗಿದೆ.
ನಗರದಲ್ಲಿ ಮೋದಿ ಚುನಾವಣಾ ಪ್ರಚಾರದ ಮೇಲ್ವಿಚಾರಕರಾದ ಅಶೋಕ್ ಚೌರಾಸಿಯಾ ಅವರು ಈ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದರು. ‘ಈ ಚುನಾವಣೆಯು ರಾಷ್ಟ್ರಕ್ಕಾಗಿ ಮನೆ– ಕುಟುಂಬವನ್ನು ತೊರೆದ ವ್ಯಕ್ತಿ ಹಾಗೂ ರಾಷ್ಟ್ರವನ್ನು ಮರೆತು ಪತ್ನಿಯರನ್ನು ಮಾತ್ರ ಪ್ರೀತಿಸುವವರ ನಡುವಿನ ಸಮರವಾಗಿದೆ’ ಎಂದು ಚೌರಾಸಿಯಾ ಹೇಳಿದರು.