ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1.69 ಕೋಟಿ ಭದ್ರತೆಗೆ ₹215 ಕೋಟಿ ಸಾಲ!

Last Updated 27 ಫೆಬ್ರುವರಿ 2017, 20:02 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲಕ್ಷ್ಮೀ ಆರ್. ಹೆಬ್ಬಾಳ್ಕರ ಅವರು ಕೈಗಾರಿಕಾ  ಪ್ರದೇಶದಲ್ಲಿನ ₹1.69 ಕೋಟಿ ಮೌಲ್ಯದ 51 ಎಕರೆ ಭೂಮಿ ತೋರಿಸಿ ₹ 215 ಕೋಟಿ ಸಾಲ ಪಡೆದಿದ್ದಾರೆ.

ಅವರು ವ್ಯವಸ್ಥಾಪಕ ನಿರ್ದೇಶಕರಾಗಿರುವ ಹರ್ಷ ಶುಗರ್ಸ್‌ ಪ್ರೈವೆಟ್‌ ಲಿಮಿಟೆಡ್‌ಗೆ ಏಳು ಸಹಕಾರಿ ಬ್ಯಾಂಕುಗಳು ಸಾಲ ಮಂಜೂರು ಮಾಡಿವೆ. ಭದ್ರತೆಗಾಗಿ ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಕೈಗಾರಿಕಾ ಪ್ರದೇಶದಲ್ಲಿರುವ 51 ಎಕರೆಯನ್ನು ಪಡೆದುಕೊಂಡಿವೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಲಕ್ಷ್ಮೀ ಹೆಬ್ಬಾಳ್ಕರ ಅವರ ಮನೆ ಮೇಲೆ ದಾಳಿ ನಡೆಸಿದ ವೇಳೆ ವಶಪಡಿಸಿಕೊಂಡಿರುವ ಹರ್ಷ ಶುಗರ್ಸ್‌ಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ, ಹರ್ಷ ಶುಗರ್ಸ್‌ಗೆ ₹ 215 ಕೋಟಿ ಸಾಲ ಮಂಜೂರಾಗಿರುವುದು ಬಯಲಾಗಿದೆ.

ಅಪೆಕ್ಸ್ ಬ್ಯಾಂಕ್‌ ₹ 50 ಕೋಟಿ, ದಕ್ಷಿಣ ಕನ್ನಡ ಜಿಲ್ಲೆ ಕೇಂದ್ರೀಯ ಸಹಕಾರ ಬ್ಯಾಂಕ್‌ ₹ 30 ಕೋಟಿ, ಬಜ್ಪೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ ₹ 20 ಕೋಟಿ, ಬಾಗಲಕೋಟೆ ಕೇಂದ್ರೀಯ ಸಹಕಾರ ಬ್ಯಾಂಕ್‌ ₹ 40 ಕೋಟಿ, ವಿಜಯಪುರ ಕೇಂದ್ರೀಯ ಸಹಕಾರ ಬ್ಯಾಂಕ್‌ ₹ 25 ಕೋಟಿ, ತುಮಕೂರು ಜಿಲ್ಲಾ ಕೇಂದ್ರೀಯ ಸಹಕಾರ ಬ್ಯಾಂಕ್‌ ₹ 25 ಕೋಟಿ ಮತ್ತು ಶಿರಸಿ   ಕೇಂದ್ರೀಯ ಸಹಕಾರ ಬ್ಯಾಂಕ್ ₹ 25 ಕೋಟಿ ಸಾಲ ನೀಡಿವೆ.

ಸವದತ್ತಿಯಲ್ಲಿ 51 ಎಕರೆ ಭೂಮಿ ಖರೀದಿಸಿದ ನಂತರ 2015ರ ಜೂನ್‌ನಲ್ಲಿ ಹರ್ಷ ಶುಗರ್ಸ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ ಅನುಮೋದನೆ ನೀಡಿದೆ. ಅದೇ ವರ್ಷದ ಅಕ್ಟೋಬರ್‌ 13ರಂದು ಈ  ಏಳು ಬ್ಯಾಂಕ್‌ಗಳು ಸೇರಿ ಸಾಲಕ್ಕೆ ಸಂಬಂಧಿಸಿದ ಒಪ್ಪಂದ ಮಾಡಿಕೊಂಡಿವೆ. ಈ ಸಂಬಂಧ ಲಕ್ಷ್ಮೀ ಹೆಬ್ಬಾಳ್ಕರ ಅವರ ಪ್ರತಿಕ್ರಿಯೆಗಾಗಿ ಸಂಪರ್ಕಿಸಲಾಯಿತಾದರೂ ಅವರು ಕರೆ ಸ್ವೀಕರಿಸಲಿಲ್ಲ. 

13 ದಿನದಲ್ಲಿ ಭೂಪರಿವರ್ತನೆ: ಪಂಚನಗೌಡ ಬಸನಗೌಡ ದ್ಯಾಮನಗೌಡರ ಎಂಬುವರು 2014ರ ಡಿಸೆಂಬರ್‌ನಲ್ಲಿ 51 ಎಕರೆ ಕೃಷಿ ಭೂಮಿಯನ್ನು ಎಕರೆಗೆ ತಲಾ ₹ 1 ಲಕ್ಷದಂತೆ ಖರೀದಿ ಮಾಡಿದ್ದರು. ನಂತರ ಕೈಗಾರಿಕಾ ಪ್ರದೇಶವಾಗಿ ಪರಿವರ್ತಿಸಿ ಕೊಡಲು ಬೆಳಗಾವಿ ಜಿಲ್ಲಾಧಿಕಾರಿಗೆ 2015ರ ಫೆಬ್ರುವರಿ 12 ರಂದು ಅರ್ಜಿ ಸಲ್ಲಿಸಿದ್ದರು. ಅದೇ ತಿಂಗಳ 26ರಂದು ಭೂಪರಿವರ್ತನೆ ಆದೇಶ ಹೊರ ಬಿದ್ದಿದೆ. ಮಾರ್ಚ್‌್ ತಿಂಗಳಲ್ಲಿ ದ್ಯಾಮನಗೌಡರ ಅವರು ಹರ್ಷ ಶುಗರ್ಸ್‌ಗೆ ಭೂಮಿ ಮಾರಾಟ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT