ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ದಿನದಲ್ಲಿ ನೀರು ಖಾಲಿ ತೀವ್ರ ವಿದ್ಯುತ್‌ ಸಂಕಷ್ಟ?

Last Updated 24 ಏಪ್ರಿಲ್ 2016, 20:04 IST
ಅಕ್ಷರ ಗಾತ್ರ

ಬೆಂಗಳೂರು: ಒಂದೆಡೆ ಬಿಸಿಲ ತಾಪ ಏರುತ್ತಿದ್ದರೆ, ಮತ್ತೊಂದೆಡೆ ಜಲಾಶಯಗಳಲ್ಲಿ ನೀರು ಖಾಲಿಯಾಗುತ್ತಿದೆ. ಇದರಿಂದ ಜಲವಿದ್ಯುತ್ ಉತ್ಪಾದನೆ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ.

‘ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ಮುಂದಿನ 20 ದಿನಗಳವರೆಗೆ ಮಾತ್ರ  ಜಲ ವಿದ್ಯುತ್‌ ಉತ್ಪಾದಿಸಬಹುದು. ಜಲಾಶಯಗಳಲ್ಲಿ ನೀರಿನ ಕೊರತೆ ಇರುವುದರಿಂದ ಈಗಾಗಲೇ ಉಷ್ಣವಿದ್ಯುತ್‌ ಘಟಕಗಳೂ ತೊಂದರೆ ಅನುಭವಿಸುತ್ತಿವೆ’ ಎಂದು ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ ಅಧಿಕಾರಿಗಳು ಹೇಳುತ್ತಾರೆ.

ಬೆಂಗಳೂರಿಗೆ ಪ್ರತಿದಿನ 2400–2500 ಮೆಗಾವಾಟ್‌ ವಿದ್ಯುತ್‌ ಅವಶ್ಯಕತೆ ಇದೆ. ಇದು ರಾಜ್ಯದ ವಿದ್ಯುತ್‌ ಉತ್ಪಾದನೆಯ ಶೇ 49 ರಷ್ಟು ಆಗುತ್ತದೆ. ನೀರಿನ ಕೊರತೆಯಿಂದಾಗಿ ಬೇಡಿಕೆ ಮತ್ತು ಉತ್ಪನ್ನದ  ಮಧ್ಯೆ ಇರುವ ಅಂತರವನ್ನು ನಿರ್ವಹಿಸುವುದು ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ಗೆ ದೊಡ್ಡ ಸವಾಲು ಆಗಿದೆ.

‘ಮುಂದಿನ 20 ದಿನಗಳಲ್ಲಿ ಜಲ ವಿದ್ಯುತ್‌ ಉತ್ಪಾದನೆ ನಿಲ್ಲಿಸಬೇಕಾಗುತ್ತದೆ. ಸದ್ಯ ಲಿಂಗನಮಕ್ಕಿ ಜಲ ವಿದ್ಯುದಾಗಾರದಲ್ಲಿ 1,200 ಮೆಗಾವಾಟ್‌ ಮತ್ತು ಶರಾವತಿ ಜಲ ವಿದ್ಯುದಾಗಾರದಲ್ಲಿ 1,000 ಮೆಗಾವಾಟ್‌  ಉತ್ಪಾದಿಸಲಾಗುತ್ತದೆ. ಇವು ಸ್ಥಗಿತಗೊಂಡರೆ ಬೆಂಗಳೂರು ಮತ್ತು ರಾಜ್ಯದ ಇತರೆ ಭಾಗದಲ್ಲಿಯೂ ವಿದ್ಯುತ್‌ ಕೊರತೆಯಾಗುತ್ತದೆ. ಮಳೆಗಾಗಿ ನಾವು ಕಾಯುತ್ತಿದ್ದೇವೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

‘ಮಳೆ ಬಾರದಿದ್ದರೆ ರಾಜ್ಯದಲ್ಲಿ ನೀರಿನ ಜೊತೆಗೆ ವಿದ್ಯುತ್‌ ಅಭಾವವನ್ನೂ ಎದುರಿಸಬೇಕಾಗುತ್ತದೆ’ ಎಂಬುದನ್ನು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಇತ್ತೀಚೆಗೆ ಒಪ್ಪಿಕೊಂಡಿದ್ದರು. ಆದರೆ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕೆ.ರವಿಕುಮಾರ್ ಅವರು ಬೆಂಗಳೂರು ಮತ್ತು ರಾಜ್ಯದಲ್ಲಿ ವಿದ್ಯುತ್‌ಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳುತ್ತಾರೆ.

‘ಜೂನ್‌ 15ರವರೆಗೆ ಪರಿಸ್ಥಿತಿ ನಿಭಾಯಿಸಬಹುದು. ಕುಡಿಯುವುದಕ್ಕೆ ಮತ್ತು ವಿದ್ಯುತ್‌ಗೆ ನೀರು ಲಭ್ಯ ಇದ್ದು, ಕೃಷಿಗೆ ನೀರು ಪೂರೈಸುವುದನ್ನು ನಿಲ್ಲಿಸಲಾಗಿದೆ. ತುಂಗಭದ್ರಾ ಮತ್ತು ನಾರಾಯಣಪುರ ಜಲಾಶಯಗಳಿಂದ ನೀರು ಹೊರಬಿಡುವುದರಿಂದ ಉಷ್ಣ ವಿದ್ಯುತ್‌ ಸ್ಥಾವರಗಳಿಗೂ ಯಾವುದೇ ತೊಂದರೆ ಯಾಗದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT