ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸರ್ಕಾರದಲ್ಲೂ ಮುಂದುವರಿದ ಶೇ 40ರಷ್ಟು ಕಮಿಷನ್‌: ಡಿ. ಕೆಂಪಣ್ಣ

Published 8 ಫೆಬ್ರುವರಿ 2024, 10:36 IST
Last Updated 8 ಫೆಬ್ರುವರಿ 2024, 10:36 IST
ಅಕ್ಷರ ಗಾತ್ರ

ಬೆಂಗಳೂರು: ‘ಶೇ 40ರಷ್ಟು ಕಮಿಷನ್‌ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಮುಂದುವರಿದಿದೆ. ಬಿಜೆಪಿ  ನೇತೃತ್ವದ ಹಿಂದಿನ ಸರ್ಕಾರದಲ್ಲಿ ಶಾಸಕರೇ ನೇರವಾಗಿ ಕಮಿಷನ್‌ ಪಡೆಯುತ್ತಿದ್ದರು. ಈಗ ಅಧಿಕಾರಿಗಳ ಮೂಲಕ ಕಮಿಷನ್‌ ಸಂಗ್ರಹಿಸಲಾಗುತ್ತಿದೆ’ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಬಹುತೇಕ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸಚಿವರು, ಶಾಸಕರಿಗೆ ನೀಡಬೇಕು ಎಂದು ಗುತ್ತಿಗೆದಾರರಿಂದ ಕಮಿಷನ್‌ ವಸೂಲಿ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಯಾವ ಅಧಿಕಾರಿಗಳು ಕಮಿಷನ್‌ ಕೇಳುತ್ತಿದ್ದಾರೆ ಎಂಬ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇದೆ. ಇನ್ನಷ್ಟು ದಾಖಲೆಗಳನ್ನು ಸಂಗ್ರಹಿಸಲಾಗುತ್ತದೆ. ಈಗಾಗಲೇ ಐದು ಮಾನನಷ್ಟ ಮೊಕದ್ದಮೆ ನನ್ನ ಮೇಲೆ ದಾಖಲಾಗಿವೆ. ಹೀಗಾಗಿ ಸದ್ಯಕ್ಕೆ ಹೆಸರು ಬಹಿರಂಗಪಡಿಸುವುದಿಲ್ಲ’ ಎಂದು ಕೆಂಪಣ್ಣ ಹೇಳಿದರು.

‘ಶೇ 40ರಷ್ಟು ಕಮಿಷನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್ ದಾಸ್ ಆಯೋಗಕ್ಕೆ ಸುಮಾರು ಏಳು ಸಾವಿರ ಪುಟಗಳ ದಾಖಲೆ ನೀಡಲಾಗಿದೆ. ಈಗಲೂ ಮುಂದುವರಿದಿರುವ ಶೇ 40ರಷ್ಟು ಕಮಿಷನ್‌ ಬಗ್ಗೆ ಅಗತ್ಯ ಸಂದರ್ಭದಲ್ಲಿ ದಾಖಲೆ ಒದಗಿಸಲಾಗುವುದು’ ಎಂದು ತಿಳಿಸಿದರು.

‘ಪೊಲೀಸ್‌ ವಸತಿ ಗೃಹ ಅಭಿವೃದ್ಧಿ ನಿಗಮ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಕಾಮಗಾರಿಗಳನ್ನು ನಡೆಸಲು ಪ್ಯಾಕೇಜ್‌ ಪದ್ಧತಿ ಅನುಸರಿಸಲಾಗುತ್ತಿದೆ. ಸ್ಥಳೀಯ ಗುತ್ತಿಗೆದಾರರನ್ನು ದೂರವಿಟ್ಟು ನೆರೆ ರಾಜ್ಯದ ಗುತ್ತಿಗೆದಾರರನ್ನು ಓಲೈಸುವ ಉದ್ದೇಶದಿಂದ ಈ ಹೀಗೆ ಮಾಡಲಾಗುತ್ತಿದೆ. ಪ್ಯಾಕೇಜ್‌ ಪದ್ಧತಿಯಿಂದ ರಾಜ್ಯದ ಸ್ಥಳೀಯ, ಸಣ್ಣ–ಮಧ್ಯಮ ಗುತ್ತಿಗೆದಾರರಿಗೆ ಸಮಸ್ಯೆಯಾಗಿದ್ದು, ಅವರಿಗೆ ಕಾಮಗಾರಿಗಳು ಸಿಗುತ್ತಿಲ್ಲ’ ಎಂದು ದೂರಿದರು.

‘ಆರ್‌. ಅಶೋಕಗೂ ದೂರು’

‘ಸರ್ಕಾರದ ಎಲ್ಲ ಇಲಾಖೆಗಳಲ್ಲಿನ ಕಮಿಷನ್‌ ಹಾಗೂ ಪ್ಯಾಕೇಜ್‌ ಟೆಂಡರ್‌ಗಳಿಂದ ಗುತ್ತಿಗೆದಾರರಿಗೆ ಆಗುತ್ತಿರುವ ಸಂಕಷ್ಟಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಮತ್ತೊಮ್ಮೆ ದೂರು ನೀಡುತ್ತೇವೆ. ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಅವರನ್ನೂ ಭೇಟಿ ಮಾಡಿ ಎಲ್ಲ ಮಾಹಿತಿ ನೀಡಲಾಗುತ್ತದೆ’ ಎಂದು ಕೆಂಪಣ್ಣ ಹೇಳಿದರು. ‘ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರದಲ್ಲಿನ ಶೇ 40ರಷ್ಟು ಕಮಿಷನ್‌ ಆರೋಪ ಮಾಡಿದಾಗ ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರೇ ನನಗೆ ಕರೆ ಮಾಡಿ ಕರೆಯಿಸಿಕೊಂಡು ಮಾಹಿತಿ ಪಡೆದಿದ್ದರು. ಎಚ್‌.ಡಿ. ಕುಮಾರಸ್ವಾಮಿ ಅವರನ್ನೂ ಇತ್ತೀಚೆಗೆ ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡಿದ್ದೇನೆ. ಅಶೋಕ ಅವರನ್ನು ಒಂದೆರಡು ದಿನಗಳಲ್ಲಿ ಭೇಟಿ ಮಾಡುತ್ತೇನೆ’ ಎಂದರು.

‘ಮುಖ್ಯ ಆಯುಕ್ತರು ಹೇಳಿದರೂ ಪ್ರಯೋಜನವಿಲ್ಲ’

‘ಬಿಬಿಎಂಪಿಯಲ್ಲಿ ಹಲವು ವಾರ್ಡ್‌ಗಳ ಕಾಮಗಾರಿಗಳನ್ನು ಸೇರಿಸಿ ಪ್ಯಾಕೇಜ್‌ ರೂಪದಲ್ಲಿ ಟೆಂಡರ್‌ ಕರೆಯಲಾಗುತ್ತಿದೆ. ಇದರ ಬಗ್ಗೆ ಗುತ್ತಿಗೆದಾರರು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಅವರಿಗೆ ದೂರು ನೀಡಿದ್ದರು. ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಲೋಕೇಶ್ ಅವರಿಗೆ ನಿರ್ದೇಶನ ನೀಡಿದ್ದ ತುಷಾರ್ ಅವರು ‘ಏಕೆ ಹೀಗೆ ಮಾಡಿದಿರಿ ಸರಿಪಡಿಸಿ’ ಎಂದು ತಾಕೀತು ಮಾಡಿದ್ದರು. ಆದರೂ ಲೋಕೇಶ್‌ ಪ್ಯಾಕೇಜ್‌ ರೂಪದಲ್ಲೇ ಟೆಂಡರ್‌ಗಳನ್ನು ಕರೆಯುತ್ತಿದ್ದಾರೆ. ಬಿಬಿಎಂಪಿ ಸೇರಿದಂತೆ ಎಲ್ಲ ಇಲಾಖೆಗಳ ಮುಖ್ಯ ಎಂಜಿನಿಯರ್‌ಗಳು ಪ್ಯಾಕೇಜ್‌ ಟೆಂಡರ್‌ಗಳನ್ನೇ ಮಾಡುತ್ತಿದ್ದಾರೆ’ ಎಂದು ಡಿ.ಕೆಂಪಣ್ಣ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT