ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ಹಗರಣ: ಕಾಟಾಚಾರಕ್ಕೆ ನಡೆಯಿತೇ ಪೊಲೀಸರ ತನಿಖೆ?

ಎರಡು ವರ್ಷದ ಹಿಂದೆಯೇ ಕ್ಲೀನ್‌ ಚಿಟ್‌!
Last Updated 22 ಜುಲೈ 2019, 4:14 IST
ಅಕ್ಷರ ಗಾತ್ರ

ಬೆಂಗಳೂರು: ಐಎಂಎ (ಐ ಮಾನಿಟರಿ ಅಡ್ವೈಸರಿ) ಸಮೂಹ ಕಂಪನಿಯ ಅಕ್ರಮ ವ್ಯವಹಾರ ಕುರಿತು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ಮಾರುಕಟ್ಟೆ ಗುಪ್ತಚರ ವಿಭಾಗ ಕೆಲವು ದಾಖಲೆ ನೀಡಿದ್ದರೂ ಡಿಸಿಪಿ (ಪೂರ್ವ ವಲಯ) ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಿದ್ದ ಸಂಗತಿ ಬಹಿರಂಗವಾಗಿದೆ.

‘ಮನ್ಸೂರ್‌ ಖಾನ್‌ ಅವರ ಒಡೆತನದ ಕಂಪನಿಗಳ ವ್ಯವಹಾರ ಕಾನೂನುಬದ್ಧವಾಗಿ ನಡೆಯುತ್ತಿದೆ’ ಎಂದು ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸರು ಪ್ರಮಾಣ ಪತ್ರ ನೀಡಿದ್ದ ವಿಷಯ 2017ರ ಜನವರಿ 12ರಂದು ರಾಜ್ಯ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಗೆ ಬಂದಾಗ ಆರ್‌ಬಿಐ ಆಕ್ಷೇಪ ವ್ಯಕ್ತಪಡಿಸಿತ್ತು. ಇದರಿಂದಾಗಿ ಪ್ರಕರಣದ ಮರು ವಿಚಾರಣೆಗೆ ಸರ್ಕಾರ ಆದೇಶಿಸಿತ್ತು.ಈ ಬಗ್ಗೆ ವಿಚಾರಣೆ ನಡೆಸಿದ್ದ ಪೂರ್ವ ವಲಯದ ಡಿಸಿಪಿ, ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಅಪರಾಧ) ಅವರಿಗೆ ವರದಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ಕೈಗೊಳ್ಳುವ ಮುನ್ನ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮೇಲ್ವಿಚಾರಣಾ ವಿಭಾಗಕ್ಕೆ (ಡಿಎನ್‌ಬಿಎಸ್‌) ಪತ್ರ ಬರೆದಿದ್ದ ಡಿಸಿಪಿ, ಕಂಪನಿ ವಿರುದ್ಧದ ಆರೋಪ ಕುರಿತು ದಾಖಲೆ ಹಾಗೂ ಮಾಹಿತಿ ಒದಗಿಸುವಂತೆ ಕೇಳಿದ್ದರು. ಅದರಂತೆ, ಮಾರುಕಟ್ಟೆ ಬೇಹುಗಾರಿಕೆ ವಿಭಾಗದ ವ್ಯವಸ್ಥಾಪಕರು ಡಿಸಿಪಿ ಅವರನ್ನು ಭೇಟಿ ಮಾಡಿ ಕೆಲವು ದಾಖಲೆಗಳನ್ನು ಹಸ್ತಾಂತರಿಸಿದ್ದರು. ಇದಾದ ಬಳಿಕವೂ ಡಿಸಿಪಿ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಿದ್ದರು.

‘ಐಎಂಎ ಮಾಲೀಕರು ತಮ್ಮ ಮೇಲಿನ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಅಲ್ಲದೆ, ಯಾವುದೇ ಸಂದರ್ಭದಲ್ಲಿ ಯಾರಿಗೂ ವಂಚನೆ ಮಾಡಿಲ್ಲ. ರಿಜಿಸ್ಟ್ರಾರ್‌ ಕಂಪನೀಸ್‌ ಇಲಾಖೆಯಲ್ಲಿ ನಿಯಮಗಳಿಗೆ ಅನುಗುಣವಾಗಿಯೇ ಐಎಂಎ ನೋಂದಣಿಯಾಗಿದೆ. ಈ ಕಂಪನಿ ಹೊಸ ಸ್ಟಾರ್ಟ್‌ಅಪ್‌ಗಳಿಗೆ ಬಡ್ಡಿರಹಿತ ಹಣಕಾಸು ನೆರವು ನೀಡುತ್ತಿದ್ದು, ಷೇರು ಮಾರುಕಟ್ಟೆಯ ದೊಡ್ಡ ದಲ್ಲಾಳಿ ಸಂಸ್ಥೆಯ ಅಂಗ ಸಂಸ್ಥೆಯಾಗಿಯೂ ಕೆಲಸ ಮಾಡುತ್ತಿದೆ’ ಎಂದು ಡಿಸಿಪಿ ತಮ್ಮ ವರದಿಯಲ್ಲಿ ಸ್ಪಷ್ಟಪಡಿಸಿದ್ದರು.

ಡಿಸಿಪಿ ಅವರ ವರದಿ ಆಧರಿಸಿ ಆರ್‌ಬಿಐನ ಮಾರುಕಟ್ಟೆ ಬೇಹುಗಾರಿಕೆ ವಿಭಾಗಕ್ಕೆ 2017ರ ಮೇ 17ರಂದು ಅಂದಿನ ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಅಪರಾಧ)ಗೆ ಪತ್ರ ಬರೆದಿದ್ದರು. ಸಮನ್ವಯ ಸಮಿತಿ ಸಭೆಯಲ್ಲಿ ಈ ಪತ್ರದ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು.

‘ಡಿಸಿಪಿ ಅವರ ಪ್ರಾಥಮಿಕ ವಿಚಾರಣಾ ವರದಿಯು, ‘ಐಎಂಎ ಯಾವುದೇ ಅಪರಾಧ ಮಾಡಿಲ್ಲ. ಕಂಪನಿ ವಿರುದ್ಧ ದೂರುಗಳಿಲ್ಲದೆ ಪೊಲೀಸರು ತನಿಖೆ ನಡೆಸಲು ಸಾಧ್ಯವಿಲ್ಲ. ಸಂಜ್ಞೇಯ ಅಪರಾಧ ಕುರಿತು ಮಾತ್ರ ತನಿಖೆ ನಡೆಸಲು ಪೊಲೀಸರಿಗೆ ಅಧಿಕಾರವಿದೆ’ ಎಂಬ ವಾದವನ್ನು ಅಪರಾಧ ವಿಭಾಗ ಮುಂದಿಟ್ಟಿತ್ತು. ‘ಒಟ್ಟಾರೆ, ಪೊಲೀಸರು ಕಾಟಾಚಾರಕ್ಕೆ ಎಂಬಂತೆ ಮನ್ಸೂರ್ ಖಾನ್‌ ಒಡೆತನದ ಕಂಪನಿ ವಿರುದ್ಧ ತನಿಖೆ ನಡೆಸಿದ್ದಾರೆ’ ಎಂಬ ಆಕ್ಷೇಪಗಳು ಪೊಲೀಸ್‌ ವಲಯದಲ್ಲೇ ಕೇಳಿಬರುತ್ತಿವೆ. ಈ ವಿಚಾರಣಾ ವರದಿಗಳು ಹಾಗೂ ಸಮನ್ವಯ ಸಮಿತಿ ನಡಾವಳಿಗಳನ್ನು ವಿಶೇಷ ತನಿಖಾ ದಳ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಪೊಲೀಸ್‌ ವಿಚಾರಣೆಗೆ ಸಂಬಂಧಿಸಿದ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ. ಈ ಬಗ್ಗೆ ಪ್ರತಿಕ್ರಿಯೆಗೆ ಅಂದಿನ ಡಿಸಿಪಿ ಹಾಗೂ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT