ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

AITUC Protest: ₹31,500 ಕನಿಷ್ಠ ವೇತನ ನಿಗದಿಗೆ ಆಗ್ರಹ

ಎಐಟಿಯುಸಿ ನೇತೃತ್ವದಲ್ಲಿ ಅಸಂಘಟಿತ ವಲಯದ ಕಾರ್ಮಿಕರ ಬೃಹತ್‌ ಪ್ರತಿಭಟನೆ
Last Updated 8 ಫೆಬ್ರುವರಿ 2023, 21:22 IST
ಅಕ್ಷರ ಗಾತ್ರ

ಬೆಂಗಳೂರು: ಅಸಂಘಟಿತ ಹಾಗೂ ಸಂಘಟಿತ ವಲಯದ ಕಾರ್ಮಿಕರನ್ನು ಕನಿಷ್ಠ ವೇತನ ಕಾಯ್ದೆ ವ್ಯಾಪ್ತಿಗೆ ತಂದು ₹31,500 ವೇತನ ನಿಗದಿಗೊಳಿಸಬೇಕು ಎಂದು ಆಗ್ರಹಿಸಿ ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ನ (ಎಐಟಿಯುಸಿ) ಸಾವಿರಾರು ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

‘ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ, ಅಕ್ಷರ ದಾಸೋಹ, ಆಶಾ ಕಾರ್ಯಕರ್ತೆಯರನ್ನು ಕನಿಷ್ಠ ವೇತನ ಕಾಯ್ದೆ ವ್ಯಾಪ್ತಿಗೆ ತಂದು ಪಿಎಸ್‌ಐ, ಪಿಎಫ್, ಗ್ರಾಚ್ಯುಟಿ ಮತ್ತು ಪಿಂಚಣಿ ಸೌಲಭ್ಯ ಒದಗಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

‘ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಉಳಿಸಿ, ಕಾರ್ಮಿಕರನ್ನು ರಕ್ಷಿಸಬೇಕು. ಸಾರಿಗೆ ನಿಗಮಗಳಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಜೊತೆ ಚರ್ಚಿಸಿ 2020ರ ಜ. 1ರಂದು ಮಾಡಿಕೊಂಡ ನಾಲ್ಕು ವರ್ಷಗಳ ವೇತನ ಒಪ್ಪಂದ ಮತ್ತು ನಾಲ್ಕು ಸಾರಿಗೆ ನಿಗಮಗಳನ್ನು ವಿಲೀನಗೊಳಿಸಬೇಕು.

‘ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿಯ ಪುನರಾರಂಭಿಸಿ, ಸೌಲಭ್ಯಗಳನ್ನು ವಿಸ್ತರಿಸಬೇಕು. ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಪಾವತಿಸಬೇಕು. ರಾಜ್ಯ ಸರ್ಕಾರದ ಸಾರ್ವಜನಿಕ ಉದ್ದಿಮೆಗಳಾದ ಕೆಎಸ್‌ಐಸಿ, ಎಂಎಸ್‌ಐಎಲ್‌, ಕೆಎಸ್‌ ಆ್ಯಂಡ್ ಡಿಎಲ್‌, ಹಟ್ಟಿ ಚಿನ್ನದ ಗಣಿ, ಕರ್ನಾಟಕ ಗ್ರಾಮಾಂತರ ಮೂಲಸೌಕರ್ಯ ಅಭಿವೃದ್ಧಿ ನಿಗಮಗಳಲ್ಲಿ ಉದ್ದೇಶಿತಶೇ 31ರಷ್ಟು ಬಂಡವಾಳ ಹಿಂತೆಗೆತವನ್ನು ಕೈಬಿಡಬೇಕು. ಸರ್ಕಾರದ ಒಡೆತನದಲ್ಲಿ ಕೋಲಾರದ ಚಿನ್ನದ ಗಣಿಯಲ್ಲಿ ಗಣಿಗಾರಿಕೆಯನ್ನು ಪುನರಾರಂಭಿಸಬೇಕು. ಚಿನ್ನದ ಗಣಿ ಕಾರ್ಮಿಕರಿಗೆ ನೀಡಲು ಬಾಕಿ ಇರುವ ₹52 ಕೋಟಿ ಕೂಡಲೇ ಪಾವತಿಸಬೇಕು.

ಬ್ಯಾಂಕ್‌, ಸಾಮಾನ್ಯ ಮತ್ತು ಜೀವವಿಮೆ ಕ್ಷೇತ್ರಗಳಲ್ಲಿ ಖಾಸಗೀಕರಣ ವನ್ನು ಕೈಬಿಡಬೇಕು. ರೈತ ವಿರೋಧಿ ಕೃಷಿ ಕಾನೂನನ್ನು ಕೂಡಲೇ ಹಿಂಪಡೆ ಯಬೇಕು. ವಿದ್ಯುತ್‌ ಖಾಸಗೀಕರಣ ಕಾಯ್ದೆಯ ತಿದ್ದುಪಡಿ ವಿಚಾರ ಕೈಬಿಡಬೇಕು. ಅವೈಜ್ಞಾನಿಕ ನೂತನ ಶಿಕ್ಷಣ ನೀತಿಯನ್ನು ಕೈಬಿಟ್ಟು, ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

‘1.7 ಕೋಟಿ ಕಾರ್ಮಿಕರು ಅರ್ಹರು’

‘ರಾಜ್ಯದಲ್ಲಿ 1.7 ಕೋಟಿ ಕಾರ್ಮಿಕರು ಕನಿಷ್ಠ ವೇತನ ಹೆಚ್ಚಳಕ್ಕೆ ಅರ್ಹರಾಗಿದ್ದು, ವಿಧಾನಸಭೆಯಲ್ಲಿ ಈ ವಿಷಯದ ಬಗ್ಗೆ ಯಾವುದೇ ಚರ್ಚೆಯಾಗುತ್ತಿಲ್ಲ’ ಎಂದು ಎಐಟಿಯುಸಿ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್ ಆಕ್ರೋಶ ವ್ಯಕ್ತಪಡಿಸಿದರು.

‘ಈಗಿನ ರಾಜಕೀಯ ನಾಯಕರು ಕಾರ್ಮಿಕ ವರ್ಗಕ್ಕೆ ದ್ರೋಹಬಗೆಯುತ್ತಿದ್ದಾರೆ. ಕ್ಷುಲ್ಲಕ ಕೆಸರೆರಚಾಟ ಮತ್ತು ಕೋಮು ರಾಜಕಾರಣ ಮಾಡುವ ಬದಲು ಜನಪರವಾದ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು’ ಎಂದು ಆಗ್ರಹಿಸಿದರು.

‘ಕಾರ್ಮಿಕ ವರ್ಗ ಇಂದು ಆರ್ಥಿಕ ಅನಿಶ್ಚಿತ ಸ್ಥಿತಿಯಲ್ಲಿದೆ. ಕಳೆದ ಐದು ವರ್ಷಗಳಲ್ಲಿ ಕನಿಷ್ಠ ವೇತನದಲ್ಲಿ ಶೇ 10ರಷ್ಟು ಮಾತ್ರ ಹೆಚ್ಚಳವಾಗಿದ್ದು, ಇದು ಕಾನೂನುಬಾಹಿರ ಹಾಗೂ ಕಾರ್ಮಿಕ ವರ್ಗಕ್ಕೆ ಮಾಡಿರುವ ಅನ್ಯಾಯ’ ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT