ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಅಕ್ರಮ ವರ್ಗಾವಣೆ ಆರೋಪ: ಪತ್ರಕರ್ತ ಕುಮಾರ್ ಬಂಧನಕ್ಕೆ ಆದೇಶ

‘ಬಿ’ಟಿವಿ ಕಂಪನಿ: ಅಕ್ರಮ ಹಣ ವರ್ಗಾವಣೆ ಆರೋಪ
Published 22 ಏಪ್ರಿಲ್ 2024, 21:38 IST
Last Updated 22 ಏಪ್ರಿಲ್ 2024, 21:38 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮವಾಗಿ ಕೋಟ್ಯಂತರ ರೂಪಾಯಿಯನ್ನು ಮೂರನೇ ವ್ಯಕ್ತಿಗೆ ವರ್ಗಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಕನ್ನಡದ ಸುದ್ದಿ ವಾಹಿನಿ ‘ಬಿ’ ಟಿವಿ ವ್ಯವಸ್ಥಾಪಕ ನಿರ್ದೇಶಕ ಗಂಗಾಧರಪ್ಪ ಮುನೀಂದ್ರ ಕುಮಾರ್ ಅಲಿಯಾಸ್‌ ಜಿ.ಎಂ.ಕುಮಾರ್‌ (50) ಅವರಿಗೆ ಸೆಷನ್ಸ್ ನ್ಯಾಯಾಲಯ ನೀಡಿದ್ದ ಜಾಮೀನನ್ನು ರದ್ದುಪಡಿಸಿರುವ ಹೈಕೋರ್ಟ್‌, ಆರೋಪಿಯನ್ನು ಕೂಡಲೇ ವಶಕ್ಕೆ ಪಡೆದು ಸಂಬಂಧಿಸಿದ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸುವಂತೆ ಸಿಸಿಬಿ ಪೊಲೀಸರಿಗೆ ಆದೇಶಿಸಿದೆ.

ಕುಮಾರ್ ಅವರಿಗೆ ನೀಡಲಾಗಿರುವ ಜಾಮೀನು ಪ್ರಶ್ನಿಸಿ ‘ಬಿ’ ಟಿವಿ ಮೂಲ ಒಡೆತನ ಹೊಂದಿರುವ ಈಗಲ್‌ ಸೈಟ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ನಿರ್ದೇಶಕ ಅಶ್ವಿನ್‌ ಮಹೇಂದ್ರ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಇದೇ 19ರಂದು ಜಾಮೀನು ರದ್ದುಪಡಿಸಿ ಆದೇಶಿಸಿದೆ.

‘ಆರೋಪಿಯ ಬಂಧನದ ಬಗ್ಗೆ ಕೈಗೊಳ್ಳಲಾದ ಕ್ರಮಗಳ ವರದಿಯನ್ನು ತನಿಖಾಧಿಕಾರಿಯು ವಿಜಯನಗರ ಪೊಲೀಸ್‌ ಠಾಣೆ ಅಥವಾ ಸಿಸಿಬಿ ಪೊಲೀಸರಿಗೆ ನೀಡಬೇಕು’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ. ಅಶ್ವಿನ್‌ ಮಹೇಂದ್ರ ಪರ ಪಿ.ಉಸ್ಮಾನ್‌ ವಾದ ಮಂಡಿಸಿದ್ದರು.

ಪ್ರಕರಣವೇನು?: ‘ಬಿ’ಟಿವಿ ಮಾತೃ ಸಂಸ್ಥೆ ಈಗಲ್‌ ಸೈಟ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ನಿಂದ ಕೋಟ್ಯಂತರ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದಡಿ ಜಿ.ಎಂ.ಕುಮಾರ್‌ ವಿರುದ್ಧ ಬೆಂಗಳೂರಿನ ವಿಜಯನಗರ ಪೊಲೀಸ್‌ ಠಾಣೆಯಲ್ಲಿ 2022ರಲ್ಲಿ ದೂರು ದಾಖಲಾಗಿತ್ತು. ಭಾರತೀಯ ದಂಡ ಸಂಹಿತೆಯ ಕಾಯ್ದೆಯಡಿ, ನಂಬಿಕೆಯ ಉಲ್ಲಂಘನೆ ಮತ್ತು ವಂಚನೆ ಆರೋಪಗಳ ಕುರಿತು ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಈ ಸಂಬಂಧ ಜಿ.ಎಂ.ಕುಮಾರ್‌ ನಿರೀಕ್ಷಣಾ ಜಾಮೀನು ಕೋರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ 2023ರ ಆಗಸ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿತ್ತು. ನಂತರ ಪೊಲೀಸರು ಆರೋಪಿಯನ್ನು 2023ರ ನವೆಂಬರ್‌ 25ರಂದು ಬಂಧಿಸಿದ್ದರು. ಕೋರ್ಟ್‌ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶಿಸಿತ್ತು. ಅನಾರೋಗ್ಯದ ಕಾರಣ ನೀಡಿದ್ದ ಆರೋಪಿಯು ಜೈಲುವಾಸದ ಬದಲಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಏತನ್ಮಧ್ಯೆ, 56ನೇ ಸೆಷನ್ಸ್‌ ನ್ಯಾಯಾಲಯ 2023ರ ಡಿಸೆಂಬರ್‌ 13ರಂದು ಜಾಮೀನು ಮಂಜೂರು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT