ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರನಾಥ ಯಾತ್ರೆ: ರಾಜ್ಯದ ಯಾತ್ರಿಕರಿಗೆ ಸಂಕಷ್ಟ, ಭಕ್ತರ ನೆರವಿಗೆ ಸಹಾಯವಾಣಿ ಆರಂಭ

ಎಲ್ಲರೂ ಸುರಕ್ಷಿತ, ಕೆಲವೇ ದಿನಗಳಲ್ಲಿ ಊರಿಗೆ ಮರಳುವ ನಿರೀಕ್ಷೆ
Published 8 ಜುಲೈ 2023, 23:30 IST
Last Updated 8 ಜುಲೈ 2023, 23:30 IST
ಅಕ್ಷರ ಗಾತ್ರ

ಗದಗ, ಕಲಬುರಗಿ: ಅಮರನಾಥ ಯಾತ್ರೆಗೆ ತೆರಳಿದ್ದ ಕಲಬುರಗಿಯ 27 ಜನರು ಮತ್ತು ಗದಗ ಜಿಲ್ಲೆಯ 23 ಮಂದಿ ಯಾತ್ರಿಕರು ಸುರಕ್ಷಿತವಾಗಿದ್ದಾರೆ.

ಹವಾಮಾನ ವೈಪರೀತ್ಯದಿಂದಾಗಿ ಮಧ್ಯದಲ್ಲೇ ಉಳಿದುಕೊಂಡಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರುವಂತೆ ಕುಟುಂಬ ವರ್ಗದವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

ಕಲಬುರಗಿಯಿಂದ ಅಮರನಾಥ ರಾಮತೀರ್ಥ ಸೇವಾ ಸಮಿತಿಯ ಮೂಲಕ ತೆರಳಿರುವ 22 ಜನರ ತಂಡವು ಜಮ್ಮು ಸಮೀಪದ ಬಾಲ್‌ತಾಲ್‌ ಶಿಬಿರದಲ್ಲಿ ಉಳಿದುಕೊಂಡಿದೆ. ಉಳಿದ ಐದು ಜನರ ತಂಡವು ಸೇನಾ ಶಿಬಿರದಲ್ಲಿ ಆಶ್ರಯ ಪಡೆದಿದೆ. ಮೂರು ದಿನಗಳ ಹಿಂದೆ ಇವರೆಲ್ಲ ಅಮರನಾಥ ಯಾತ್ರೆಗೆ ತೆರಳಿದ್ದರು. ಎಲ್ಲರೂ ಕಲಬುರಗಿ ನಗರದವರು. ಜುಲೈ 14ರಂದು ವಾಪಸಾಗಲಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ರಾಚಪ್ಪ ತಿಳಿಸಿದ್ದಾರೆ.

ಗದಗದಿಂದ ಹೋಗಿರುವ ವಿನೋದ್‌ ಸಿ.ಪಟೇಲ್‌, ನೀತಾ ವಿ.ಪಟೇಲ್‌, ಚಂದೂಲಾಲ್‌ ಪಟೇಲ್‌, ಭಾವನಾ ಪಟೇಲ್‌, ತೇಜಲ್‌, ಶಾರದಾ, ಭೂಮಿಕಾ, ರಿತೇಶ್‌, ಪರ್ವಿನ್‌ ವಿ.ನಿರ್ಮಲ್‌, ಟೀನಾ ಪಿ. ನಿರ್ಮಲ್‌, ರಾಜೇಶ್‌ ಬಿ., ಪಾಲಕ್‌ ಆರ್‌., ವೈಶಾಲಿ ಬಿ., ಯಶ್‌ ಆರ್‌., ಪ್ರವೀಣ್‌ ಸಿ., ಪಿಂಕಿ ಪಿ., ಪ್ರಣೀತಾ ಪಿ., ವಿನಯ್‌ ಪಿ., ಜಾಹ್ನವಿ ವಿ., ಭವೇಶ್‌ ಬಿ., ತೃಪ್ತಿ ಬಿ., ದಿವಿತ್‌ ಬಿ., ಮಾಳವಿಕಾ ಆರ್‌. ಸಂಘಾನಿ ಅಮರನಾಥದಲ್ಲಿ ಸಿಲುಕಿಕೊಂಡವರು.

‘ಗುಜರಾತಿ ಸಮಾಜಕ್ಕೆ ಸೇರಿದ ನಾವೆಲ್ಲ ಒಟ್ಟಾಗಿ ಗದಗ ನಗರದಿಂದ ಜುಲೈ 4ರಂದು ಅಮರನಾಥ ಯಾತ್ರೆಗೆ ಬಂದಿದ್ದೆವು. ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಮಧ್ಯದಲ್ಲೇ ಸಿಕ್ಕಿಹಾಕಿಕೊಂಡು, ಶಿಬಿರದಲ್ಲಿ ಕುಳಿತಿದ್ದೇವೆ. ಎಲ್ಲರೂ ಸುರಕ್ಷಿತವಾಗಿದ್ದೇವೆ. ಕೆಟ್ಟ ಹವಾಮಾನ ಇನ್ನೂ ಎರಡು ದಿನಗಳ ಕಾಲ ಹೀಗೆ ಇರಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ವಿನೋದ್‌ ಪಟೇಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಮಾತನಾಡಿ, ‘ಆ ದಾರಿಯಲ್ಲಿ ಒಟ್ಟು 15 ಸಾವಿರ ಮಂದಿ ಯಾತ್ರಿಕರು ಇದ್ದಾರೆ. ಕನ್ನಡಿಗರು ಇರುವ ಕ್ಯಾಂಪ್‌ನಲ್ಲಿ 880 ಮಂದಿ ಇದ್ದಾರೆ. ಹವಾಮಾನ ಸರಿಯಿಲ್ಲ ಎಂಬ ಕಾರಣಕ್ಕೆ ಯಾತ್ರಿಕರನ್ನು ಮುಂದಕ್ಕೆ ಬಿಡುತ್ತಿಲ್ಲವಷ್ಟೇ, ಯಾತ್ರಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ಅಲ್ಲಿನ ಅಧಿಕಾರಿಗಳು ನಮ್ಮ ಜತೆಗೆ ಸಂಪರ್ಕದಲ್ಲಿದ್ದು, ಯಾತ್ರಿಕರ ಕಾಳಜಿಗೆ ಕ್ರಮವಹಿಸಿದ್ದಾರೆ. ಎರಡು ದಿನಗಳ ಬಳಿಕ ಯಾತ್ರಿಕರು ಸುರಕ್ಷಿತವಾಗಿ ಹಿಂತಿರುಗುವ ಭರವಸೆ ಇದೆ’ ಎಂದು ತಿಳಿಸಿದ್ದಾರೆ.

‘ಟೆಂಟ್‌ನಲ್ಲಿ ಸಿಲುಕಿರುವ ಯಾತ್ರಿಕರಿಗೆ ಬೇಕಿರುವ ಅಗತ್ಯ ಸೌಕರ್ಯಗಳನ್ನು ರಾಜ್ಯ ಸರ್ಕಾರದ ವತಿಯಿಂದ ಒದಗಿಸಲಾಗುತ್ತಿದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.ನೇಮಗೌಡ ತಿಳಿಸಿದ್ದಾರೆ.

ಭಕ್ತರ ನೆರವಿಗೆ ಸಹಾಯವಾಣಿ ಆರಂಭ

ಬೆಂಗಳೂರು: ‘ಅಮರನಾಥ ಯಾತ್ರೆಗೆ ತೆರಳಿರುವ 1,000ಕ್ಕೂ ಹೆಚ್ಚು ಭಕ್ತರು ಹವಾಮಾನ ವೈಪರೀತ್ಯದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಮಾಹಿತಿ ಲಭ್ಯವಾಗಿದೆ. ಈ ಪೈಕಿ 80ಕ್ಕೂ ಹೆಚ್ಚು ಮಂದಿ ಕರ್ನಾಟಕದವರು ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಅವರೆಲ್ಲರೂ ಅಮರನಾಥ ಮಂದಿರದಿಂದ ಆರು ಕಿ.ಮೀ ದೂರದಲ್ಲಿರುವ ಮಿಲಿಟರಿ ಕ್ಯಾಂಪ್‌ ಪಂಚತಾರ್ನಿ ಟೆಂಟ್‌ನಲ್ಲಿ ಆಶ್ರಯ ಪಡೆದಿದ್ದಾರೆ’ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಸುನೀಲ್‌ಕುಮಾರ್‌ ತಿಳಿಸಿದರು.

‌‌‘ಪ್ರಜಾವಾಣಿ‘ ಜೊತೆ ಶನಿವಾರ ಸಂಜೆ ಮಾತನಾಡಿದ ಅವರು, ‘ಕನ್ನಡಿಗರು ಸಿಲುಕಿರುವ ಜಾಗಕ್ಕೆ ತಕ್ಷಣ ತೆರಳಿ ಎಲ್ಲರನ್ನೂ ಸುರಕ್ಷಿತವಾಗಿ ಕರೆದುಕೊಂಡು ಬರಲು ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಅದರಂತೆ, ಭಾನುವಾರ ಬೆಳಿಗ್ಗೆ ಅಲ್ಲಿಗೆ ತೆರಳುತ್ತೇನೆ’ ಎಂದರು.

‘ನಮಗೆ ಶ್ರೀ ಅಮರನಾಥ ದೇವಸ್ಥಾನ ಮಂಡಳಿಯಿಂದ ಬಂದ ಮಾಹಿತಿ ಪ್ರಕಾರ ಬೇರೆ, ಬೇರೆ ರಾಜ್ಯದ ಅನೇಕ ಮಂದಿ ಅಲ್ಲಿ ಸಿಲುಕಿದ್ದಾರೆ. ಆದರೆ, ಎಲ್ಲರೂ ಸುರಕ್ಷಿತವಾಗಿದ್ದಾರೆ. ಮಂಡಳಿಯವರೇ ಎಲ್ಲ ಸುರಕ್ಷತಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ಗದಗದಿಂದ ತೆರಳಿದ ಕೆಲವರು ತಮ್ಮ ಕುಟುಂಬ ಸದಸ್ಯರ ಜೊತೆ ಸಂಪರ್ಕ ಸಾಧಿಸಿದ್ದಾರೆ. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಇಡೀ ಪ್ರದೇಶದಲ್ಲಿ ಕತ್ತಲು ಆವರಿಸಿದೆ. ಆದಷ್ಟು ಬೇಗ ಸ್ಥಳದಿಂದ ತೆರವುಗೊಳಿಸುವಂತೆ ಮನವಿ ಮಾಡುತ್ತಿದ್ದಾರೆ’ ಎಂದರು.

‘ಸಂಕಷ್ಟದಲ್ಲಿರುವವರ ನೆರವಿಗಾಗಿ ಸಹಾಯವಾಣಿಗಳನ್ನು ಆರಂಭಿಸಲಾಗಿದೆ. ಅಮರನಾಥ ದೇವಸ್ಥಾನ ಮಂಡಳಿಯ ಸಹಾಯವಾಣಿ–14464, 18001807198 (ಟ್ರೋಲ್‌ ಫ್ರೀ) ಅಥವಾ ಪಂಚತಾರ್ನಿ ಬೇಸ್‌ ಕ್ಯಾಂಪ್‌ನ ಸಹಾಯವಾಣಿ– 9906037370, 9414121477, 9419123373, ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಸಹಾಯವಾಣಿ– 1070, 080–22253707, 080–22340676 ಗೆ ಸಂಪರ್ಕಿಸಬಹುದು’ ಎಂದೂ ಅವರು ತಿಳಿಸಿದರು.

2ನೇ ದಿನವೂ ಯಾತ್ರೆ ಸ್ಥಗಿತ

ಶ್ರೀನಗರ: ಕಾಶ್ಮೀರದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ, ಅಮರನಾಥ ಯಾತ್ರೆಯನ್ನು ಸತತ ಎರಡನೇ ದಿನವೂ (ಶನಿವಾರ) ಸ್ಥಗಿತಗೊಳಿಸಲಾಗಿದೆ. ಹಲವೆಡೆ ಭೂಕುಸಿತ ಉಂಟಾಗಿದ್ದರಿಂದ ಶ್ರೀನಗರ– ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.

‘ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಪಹಲ್ಗಾಮ್ ಮತ್ತು ಬಲ್‌ತಾಲ್ ಮಾರ್ಗಗಳಲ್ಲಿ ಎರಡನೇ ದಿನವೂ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮರನಾಥ ಯಾತ್ರೆಗೆ ತೆರಳಿ ಹವಾಮಾನ ವೈಪರೀತ್ಯದಿಂದ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಅಗತ್ಯ ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT