ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿ ಹುತಾತ್ಮರಾದ ಯೋಧ ಪ್ರಾಂಜಲ್‌ ಮನೆಯಲ್ಲಿ ಮಡುಗಟ್ಟಿದ ಶೋಕ

Published 23 ನವೆಂಬರ್ 2023, 23:32 IST
Last Updated 23 ನವೆಂಬರ್ 2023, 23:32 IST
ಅಕ್ಷರ ಗಾತ್ರ

ಆನೇಕಲ್: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿಯಲ್ಲಿ ಉಗ್ರರ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾದ 63-ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್‌ ಎಂ.ವಿ.ಪ್ರಾಂಜಲ್‌ (29) ಅವರ ಜಿಗಣಿಯ ಮನೆಯಲ್ಲಿ ಶೋಕ ಮಡುಗಟ್ಟಿದೆ. 

ಆರು ತಿಂಗಳಿಂದ ಪ್ರಾಂಜಲ್‌ ಪೋಷಕರು ಆನೇಕಲ್‌ ತಾಲ್ಲೂಕಿನ ಜಿಗಣಿ ಸಮೀಪದ ನಂದನವನ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಸುದ್ದಿ ತಿಳಿಯುತ್ತಲೇ ಬಂಧುಗಳು ಮತ್ತು ಸ್ನೇಹಿತರು ಮನೆಗೆ ತೆರಳಿ ಸಾಂತ್ವನ ಹೇಳುತ್ತಿದ್ದಾರೆ. 

ಶುಕ್ರವಾರ ಬೆಳಗ್ಗೆ ವಿಶೇಷ ವಿಮಾನದಲ್ಲಿ ಪಾರ್ಥಿವ ಶರೀರ ಬೆಂಗಳೂರಿಗೆ ಬರುವ ಸಾಧ್ಯತೆ ಇದೆ. ಸರ್ಕಾರಿ ಗೌರವದೊಂದಿಗೆ ಅಂತಿಮ ವಿಧಿ, ವಿಧಾನ ನಡೆಸಲು ಸಿದ್ಧತೆ ನಡೆಯುತ್ತಿದೆ.

ಮೈಸೂರು ಮೂಲದ ಪ್ರಾಂಜಲ್‌ ಅವರು ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್‌) ನಿವೃತ್ತ ನಿರ್ದೇಶಕ ವೆಂಕಟೇಶ್‌ ಮತ್ತು ಅನುರಾಧ ದಂಪತಿಯ ಏಕೈಕ ಪುತ್ರ.  

ಎರಡು ವರ್ಷದ ಹಿಂದೆ ಕಾಶ್ಮೀರಕ್ಕೆ ತೆರಳುವ ಮುನ್ನ ಬೆಂಗಳೂರಿನ ಅದಿತಿ ಎಂಬುವರನ್ನು ಮದುವೆಯಾಗಿದ್ದರು. ಅದಿತಿ ಪ್ರಸ್ತುತ ಚೆನ್ನೈನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪತಿಯ ಸಾವಿನ ಸುದ್ದಿ ಕೇಳಿ ಅವರೂ ಜಿಗಣಿ ನಿವಾಸಕ್ಕೆ ಬಂದಿದ್ದಾರೆ. 

‘ದಸರಾ ಸಂದರ್ಭದಲ್ಲಿ ಮನೆಗೆ ಬಂದಿದ್ದ ಪ್ರಾಂಜಲ್‌ ಪೂಜೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಸೇನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದರು’ ಎಂದು ಸಂಬಂಧಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಆನೇಕಲ್ ತಹಶೀಲ್ದಾರ್‌ ಶಿವಪ್ಪ ಎಚ್‌.ಲಮಾಣಿ ಅವರು ಪ್ರಾಂಜಲ್‌ ಅವರ ನಿವಾಸಕ್ಕೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು. 

ಬಾಲ್ಯದಿಂದಲೂ ಯೋಧನಾಗಬೇಕೆಂಬ ಕನಸು ಕಂಡಿದ್ದ ಪ್ರಾಂಜಲ್‌ ಮಂಗಳೂರಿನ ಎಂಆರ್‌ಪಿಎಲ್‌ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದಿದ್ದರು. ನಂತರ ಮಹೇಶ್‌ ಪಿಯು ಕಾಲೇಜಿನಲ್ಲಿ ಪಿಯು ಶಿಕ್ಷಣ ಪೂರೈಸಿದ್ದರು. ಮಧ್ಯಪ್ರದೇಶದ ಮಿಲಿಟರಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದ ಬಳಿಕ ತಮ್ಮ ಆಸೆಯಂತೆ ಭಾರತೀಯ ಸೇನೆ ಸೇರಿದ್ದರು.   

ಆನೇಕಲ್‌ ತಾಲ್ಲೂಕಿನ ಜಿಗಣಿ ಸಮೀಪದ ನಂದನವನ ಬಡಾವಣೆಯಲ್ಲಿರುವ ಕ್ಯಾಪ್ಟನ್‌ ಪ್ರಾಂಜಲ್‌ ಅವರ ಮನೆಯ ಮುಂದೆ ಗುರುವಾರ ಕಂಡುಬಂದ ದೃಶ್ಯ. 
ಆನೇಕಲ್‌ ತಾಲ್ಲೂಕಿನ ಜಿಗಣಿ ಸಮೀಪದ ನಂದನವನ ಬಡಾವಣೆಯಲ್ಲಿರುವ ಕ್ಯಾಪ್ಟನ್‌ ಪ್ರಾಂಜಲ್‌ ಅವರ ಮನೆಯ ಮುಂದೆ ಗುರುವಾರ ಕಂಡುಬಂದ ದೃಶ್ಯ. 
ಆನೇಕಲ್‌ ತಹಶೀಲ್ದಾರ್‌ ಶಿವಪ್ಪ ಎಚ್‌.ಲಮಾಣಿ ಅವರು ಪ್ರಾಂಜಲ್‌ ಕುಟುಂಬದವರಿಗೆ ಸಾಂತ್ವನ ಹೇಳಿದರು
ಆನೇಕಲ್‌ ತಹಶೀಲ್ದಾರ್‌ ಶಿವಪ್ಪ ಎಚ್‌.ಲಮಾಣಿ ಅವರು ಪ್ರಾಂಜಲ್‌ ಕುಟುಂಬದವರಿಗೆ ಸಾಂತ್ವನ ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT