ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದನದ ಮಾಂಸ| ಎಫ್‌ಐಆರ್‌ ರದ್ದು: ಹೈಕೋರ್ಟ್‌ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್‌

ದನದ ಮಾಂಸದ ಅಕ್ರಮ ದಾಸ್ತಾನು ಪ್ರಕರಣ
Published 27 ಫೆಬ್ರುವರಿ 2024, 16:06 IST
Last Updated 27 ಫೆಬ್ರುವರಿ 2024, 16:06 IST
ಅಕ್ಷರ ಗಾತ್ರ

ನವದೆಹಲಿ: ಗೋದಾಮಿನಲ್ಲಿ ಬೃಹತ್‌ ಪ್ರಮಾಣದ ದನದ ಮಾಂಸದ ಅಕ್ರಮ ದಾಸ್ತಾನಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ಐಆರ್‌ ಅನ್ನು ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್‌ ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕರು ಸಂಗ್ರಹಿಸಿದ್ದ ಮಾದರಿಗಳು ಸಂಪೂರ್ಣವಾಗಿ ಕಾನೂನುಬಾಹಿರವಾಗಿವೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿ ಅಭಯ್‌ ಎಸ್‌. ಓಕಾ ಮತ್ತು ಉಜ್ಜಲ್‌ ಭುಯಾನ್‌ ಅವರಿದ್ದ ವಿಭಾಗೀಯ ಪೀಠ, ಹೈಕೋರ್ಟ್‌ನ ತೀರ್ಪಿನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಹೇಳಿದೆ. 

ಈ ಹಿಂದೆ ಪ್ರಕರಣದ ಆರೋಪಿಗಳಾದ ಅಸೀಫಾ ಸುಲ್ತಾನಾ ಮತ್ತು ಇತರರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ರದ್ದುಗೊಳಿಸಿದ ಹೈಕೋರ್ಟ್‌ ಆದೇಶವನ್ನು ನ್ಯಾಯಪೀಠ ಎತ್ತಿಹಿಡಿದಿದೆ.

ಈ ಪ್ರಕರಣದಲ್ಲಿ ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಓಂಕಾರ್‌ ಪಾಟೀಲ ಅವರಿಗೆ ಮಾದರಿಗಳನ್ನು ಸಂಗ್ರಹಿಸುವ ಅಧಿಕಾರವೇ ಇರಲಿಲ್ಲ. ಇದು ಸಂಪೂರ್ಣವಾಗಿ ಕಾನೂನುಬಾಹಿರ ನಡೆ. ಈ ಕೆಲಸವನ್ನು ಪೊಲೀಸರು ನಿರ್ವಹಿಸಬೇಕಿತ್ತು. ಈ ಮಾದರಿಗಳನ್ನು ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಬೇಕಿತ್ತು. ಬದಲಿಗೆ ಅಧಿಕಾರಿಯೊಬ್ಬರು ಕಾನೂನುಬಾಹಿರವಾಗಿ ಸಂಗ್ರಹಿಸಿದ ಮಾಂಸದ ಮಾದರಿಯ ಆಧಾರದ ಮೇಲೆ ವಿಚಾರಣೆ ನಡೆಸಲಾಗಿದೆ. ಎಫ್‌ಐಆರ್‌ ರದ್ದುಗೊಳಿಸಿದ ಹೈಕೋರ್ಟ್‌ ತೀರ್ಪು ಸರಿಯಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಕರ್ನಾಟಕ ಗೋಹತ್ಯೆ ತಡೆಗಟ್ಟುವಿಕೆ ಮತ್ತು ಜಾನುವಾರು ಸಂರಕ್ಷಣೆ
ಕಾಯ್ದೆ 1964 ರ ಸೆಕ್ಷನ್‌ 10ರ ಪ್ರಕಾರ, ಆ ಅಧಿಕಾರಿಯ ಅಧಿಕಾರದ ವ್ಯಾಪ್ತಿ ಸೀಮಿತವಾಗಿದೆ ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ಪೊಲೀಸರು ಈ ಸ್ಥಳಕ್ಕೆ ಭೇಟಿ ನೀಡಿದ್ದರೂ ಮಾದರಿಗಳನ್ನು ಸಂಗ್ರಹಿಸಿಲ್ಲ ಎಂಬ ವಿಷಯವನ್ನು ಗಮನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT